ಶುದ್ಧ ನೀರನ್ನು ಕೊಡಲಾಗದೆ ಜನರನ್ನ ಸಾಯಿಸುವ ಪ್ರಯತ್ನ ಮಾಡುತ್ತಿದ್ದೀರಾ? - ಆರಗ ಜ್ಞಾನೇಂದ್ರ ಆಕ್ರೋಶ Araga jnanendra

ಶುದ್ಧ ನೀರನ್ನು ಕೊಡಲಾಗದೆ ಜನರನ್ನ ಸಾಯಿಸುವ ಪ್ರಯತ್ನ ಮಾಡುತ್ತಿದ್ದೀರಾ? - ಆರಗ ಜ್ಞಾನೇಂದ್ರ ಆಕ್ರೋಶ

ತೀರ್ಥಹಳ್ಳಿ : ಪಟ್ಟಣ ಪಂಚಾಯಿತಿಯ ಆಡಳಿತದಲ್ಲಿ ದಿನಕ್ಕೊಬ್ಬರು ಅಧ್ಯಕ್ಷರಾಗಿ ನಮಗೆ ಬೇಸರವಿಲ್ಲ ಆದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಇತ್ತೀಚೆಗೆ ಕುರ್ಚಿ ವಿಚಾರದಲ್ಲಿ ಗದ್ದಲ ಗಲಾಟೆ ಕೋರ್ಟ್ ಕೇಸ್ ಎನ್ನುವಂತೆ  ನಡೆಯುತ್ತಿದೆ. ಇಲ್ಲಿನ ಕಥೆ ಹೇಗಾಗಿದೆ ಎಂದರೆ ಕಾಂಗ್ರೆಸ್ ನವರೇ ಆಡಳಿತ ನಡೆಸುತ್ತಿದ್ದಾರೆ ಅವರೇ ವಿರೋಧ ಪಕ್ಷದವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಸೋಮವಾರ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಎದುರು  ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಆಡಳಿತದ ವಿರುದ್ಧ ನಡೆಸಲಾದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೀರ್ಥಹಳ್ಳಿ ಒಂದು ಸುಸಂಸ್ಕೃತವಾದ ಪಟ್ಟಣ. ಈಗ ಬಂದವರಲ್ಲ ಇಲ್ಲಿ ಹೊಂಡ ಗುಂಡಿ ಇದೆ ಎಂದು ಮಾತನಾಡುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಕಾರ್ಯಾಲಯದ ಒಳಗೆ ಏನೆಲ್ಲಾ ನಡೆಯುತ್ತಿದೆ ಎಂದು ನನಗೆ ತಿಳಿದಿದೆ. ಕಚೇರಿ ಒಳಗೆ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ನಿಮಗೆ ಜನ ಓಟು ಕೊಟ್ಟು ಗೆಲ್ಲಿಸಿದ್ದಾರೆ ಎಂದ ಮೇಲೆ ಪಟ್ಟಣದಲ್ಲಿ ಕೆಲಸ ಕಾರ್ಯನಿರ್ವಹಿಸಬೇಕು. ಕೆಲಸ ಮಾಡಲು ಏಕೆ ಆಗಲ್ಲ, ನೀವೆಲ್ಲ ಶೋ ಪೀಸ್ ಗಳ? ಎಂದು ಆಕ್ರೋಶವಾಗಿ ಮಾತನಾಡಿದರು.

ಸಣ್ಣ ಸಣ್ಣ ಕೆಲಸಗಳಿಗೆ ಹತ್ತಾರು ಬಾರಿ ಕಚೇರಿಗೆ ಅಲೆಯಬೇಕಾಗಿದೆ. 24 ಗಂಟೆ ನೀರನ್ನು ನಾವು ಮಂಜೂರು ಮಾಡಿಸಿಕೊಂಡು ಬಂದಿದ್ದವು. ಆದರೆ ಈಗ ನಿಮಗೆ ಟ್ರೀಟ್ಮೆಂಟ್ ಮಾಡಿ ನೀರು ಕೊಡಲು ಏನು ಬ್ಯಾನೇ? ಎಂದು ಪ್ರಶ್ನೆ ಮಾಡಿದರು. ಶುದ್ಧ ನೀರನ್ನು ಕೊಡಲಾಗದೆ ಜನರನ್ನ ಸಾಯಿಸುವ ಪ್ರಯತ್ನ ಮಾಡುತ್ತಿದ್ದೀರಿ. ಇನ್ನು ಇಂದಿರಾ ಕ್ಯಾಂಟೀನ್ ಕಟ್ಟಡ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಇವತ್ತಿಗೂ ಇಂದಿರಾ ಕ್ಯಾಂಟೀನ್ ಓಪನ್ ಆಗಲಿಲ್ಲ. ಇಂದಿರಾ ಕ್ಯಾಂಟೀನ್ ನಲ್ಲಿ ತಿಂದಂತಹ ಬಡವರಿಗೆ ಹಸಿವೆ ಹೊರಟು ಹೋಯಿತು ಎಂದು ವ್ಯಂಗ್ಯವಾಡಿದರು.

 ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನವೀನ್ ಹೆದ್ದೂರು, ಪಟ್ಟಣ ಪಂಚಾಯತ್ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ರವೀಶ್ ಬಾಬಿ, ಕುಕ್ಕೆ ಪ್ರಶಾಂತ್, ಸಂತೋಷ್ ದೇವಾಡಿಗ, ಸಂತೋಷ್ ಬಾಳೆಬೈಲು, ರಕ್ಷಿತ್ ಮೇಗರವಳ್ಳಿ, ವಿನುತ್ ಸೇರಿ ಹಲವರು ಉಪಸ್ಥಿತರಿದ್ದರು.



Previous Post Next Post