ದೆವ್ವ ಬಿಡಿಸುವುದಾಗಿ ಥಳಿತ : ಮಹಿಳೆ ಸಾವು, ಆರೋಪಿತ ಮಹಿಳೆಯ ಬಂಧನ..! shivamogga

ದೆವ್ವ ಬಿಡಿಸುವುದಾಗಿ ಥಳಿತ : ಮಹಿಳೆ ಸಾವು, ಆರೋಪಿತ ಮಹಿಳೆಯ ಬಂಧನ..!


ಶಿವಮೊಗ್ಗ: ದೆವ್ವ ಬಿಡಿಸುವುದಾಗಿ ಮಹಿಳೆಯನ್ನು ಥಳಿಸಿದ ಪರಿಣಾಮ ಥಳಿತಕ್ಕೆ ಒಳಗಾದ ಮಹಿಳೆ ಸಾವನ್ನಪ್ಪಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭದ್ರಾವತಿ ತಾಲೂಕು ಜಂಬರಗಟ್ಟೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ ಮತ್ತು ಎಸ್​​​ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (45) ಮೃತ ಮಹಿಳೆ.‌ ಘಟನೆ ಸಂಬಂಧ ಮೃತ ಗೀತಮ್ಮ ಅವರ ಪುತ್ರ ಸಂಜಯ್, ತಮ್ಮ ತಾಯಿಗೆ ಥಳಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಥಳಿಸಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಮಹಿಳೆಯನ್ನು ಬಂಧಿಸಿದ್ದಾರೆ.

ಮೃತ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಮಹಿಳೆ ದೆವ್ವ ಬಿಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ಮುಖಂಡರು ರಾಜಿ ಪಂಚಾಯಿತಿ ನಡೆಸಲು ಮಾಡಿದ ಪ್ರಯತ್ನ ಫಲ ನೀಡಿಲ್ಲ ಎನ್ನಲಾಗಿದೆ. ಮೃತಳ ಮಗ ಸಂಜಯ್ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಪ್ರಕರಣದ ಬಗ್ಗೆ ಎಸ್​​​ಪಿ ಪ್ರತಿಕ್ರಿಯೆ: ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಮಿಥುನ್ ಕುಮಾರ್ "ಜಂಬರಗಟ್ಟೆ ಗ್ರಾಮದಲ್ಲಿ‌ ದೆವ್ವ ಬಿಡಿಸುವ ನೆಪದಲ್ಲಿ ಒಬ್ಬ ಮಹಿಳೆ ಗೀತಮ್ಮ ಎಂಬುವರಿಗೆ ಥಳಿಸಿದ ಪರಿಣಾಮ ಗೀತಮ್ಮ ಸಾವನ್ನಪ್ಪಿದ್ದಾರೆ. ಈ ಕುರಿತು ಗೀತಮ್ಮ ಅವರ ಮಗ ಸಂಜಯ್ ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ" ಎಂದು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಸ್ಥಳೀಯರು ಹೇಳುವಂತೆ, ಭದ್ರಾವತಿ ತಾಲೂಕು ಬಂಜರಘಟ್ಟೆ ಗ್ರಾಮದ ಗೀತಮ್ಮ ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿ ಮನೆಯಲ್ಲಿಯೇ ಮಂಕಾಗಿದ್ದರು. ಜುಲೈ 6ರಂದು ರಾತ್ರಿ 9.30ಕ್ಕೆ ಮೃತೆ ಗೀತಮ್ಮನ ಮನೆಗೆ ಬಂದ ಮಹಿಳೆ (ಥಳಿಸಿದವರು) ಮಂಕಾಗಿದ್ದ ಗೀತಮ್ಮಳಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸುವುದಾಗಿ ಗೀತಮ್ಮನ ಮಗನ ಹತ್ತಿರ ಹೇಳಿದ್ದಾರೆ. ಆಗ ಮಗ ಸಂಜಯ್ ತಾಯಿ ಹುಷಾರಾದರೆ ಸಾಕು ಎಂದು ಮಹಿಳೆ ಹೇಳಿದಂತೆ ದೆವ್ವ ಬಿಡಿಸಲು ಒಪ್ಪಿಕೊಂಡಿದ್ದರು.

ನಂತರ ಮಹಿಳೆ ತನ್ನ ಮೇಲೆ ಚೌಡಮ್ಮ ಬಂದಿದೆ ಎಂದು ಗೀತಮ್ಮಳ ಮೇಲಿನ ದೆವ್ವ ಬಿಟ್ಟು ಹೋಗು ಎಂದು ಕೋಲಿನಿಂದ ಹೊಡೆಯಲು ಆರಂಭಿಸಿದ್ದಾರೆ. ಆದರೂ ದೆವ್ವ ಹೋಗಿಲ್ಲ ಎಂದು ಮನೆಯಿಂದ ಎರಡೂವರೆ ಕಿ.ಮೀ. ದೂರವಿರುವ ಹಳೇ ಜಂಭರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ಹೊಡೆದುಕೊಂಡು ಹೋಗಿದ್ದಾರೆ. ದೆವ್ವ ಬಿಟ್ಟಿಲ್ಲ ಎಂದು ಬೆಳಗಿನ ಜಾವ 2.30ರವರೆಗೂ ಥಳಿಸುವುದನ್ನು ಬಿಟ್ಟಿಲ್ಲ. ಆ ಮಹಿಳೆಗೆ ಕಳೆದ ಹದಿನೈದು ದಿನಗಳಿಂದ ಗ್ರಾಮದ ದೇವರೊಂದು ಮೈಮೇಲೆ ಬರುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಗೀತಮ್ಮನ ಮೈಯಲ್ಲಿದ್ದ ಆತ್ಮ ಹೋಗಿದೆ. ಇನ್ನು ಮುಂದೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ಗೀತಮ್ಮನನ್ನು ಮಹಿಳೆ ಮನೆಗೆ ಕಳುಹಿಸಿದ್ದಾರೆ. ನಡೆಯಲಾಗದೇ ತೀವ್ರ ಅಸ್ವಸ್ಥವಾಗಿದ್ದ ಗೀತಮ್ಮನನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯಾಧಿಕಾರಿಗಳು ಗೀತಮ್ಮ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಅಲ್ಲಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ.



Previous Post Next Post