ಬಿ.ಇ.ಓ. ಗಣೇಶ್ ಇವರನ್ನು ತಕ್ಷಣ ಅಮಾನತು ಪಡಿಸಿ ತನಿಖೆ ನಡೆಸುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಗ್ರಹ..!
ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಇವರ ವಿಶೇಷ ಕಾಳಜಿಯಿಂದ ಈ ಸಾಲಿನ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ರಾಜ್ಯದ ಗಮನ ಸೆಳೆದಿದ್ದು, ತೀರ್ಥಹಳ್ಳಿ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ನಿಂತಿದೆ. ಈ ಸಾಧನೆಗೆ ಶಿಕ್ಷಕರು, ಶಾಲಾ ಆಡಳಿತ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರಣರಾಗಿದ್ದಾರೆ. ಆದರೆ, ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ಇವರು ತನ್ನೊಬ್ಬನ ಸಾಧನೆ ಎನ್ನುವಂತೆ ಬಿಂಬಿಸಲು ಹೊರಟಿದ್ದು, ಸಚಿವರು ಸರ್ಕಾರದ ಪಾಲುದಾರಿಕೆ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಇವರು ಬಿಜೆಪಿ ಪಕ್ಷದ ಎಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಪ್ರಮುಖ ಯೋಜನೆಗಳಾದ
ವಿದ್ಯಾಸಿರಿ, ಬಿಸಿಯೂಟ, ಶೂ ಸಾಕ್ಸ್ ಭಾಗ್ಯ, ಹಾಲು ಮೊಟ್ಟೆಗಳ ವಿತರಣೆ ಬಗ್ಗೆ ಸರಿಯಾದ ಮಾಹಿತಿಯನ್ನು
ಎಸ್‌ಡಿಎಂಸಿಗಳಿಗೆ ನೀಡುತ್ತಿಲ್ಲ. ತಾಲ್ಲೂಕಿನಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ಅಥವಾ ಸರ್ಕಾರದ ಪ್ರತಿನಿಧಿಗಳಿಗೆ ಆಡಳಿತ ಪಕ್ಷವಾದ ಕಾಂಗ್ರೆಸ್‌ನ ಪ್ರಮುಖರಿಗೆ ಗಮನಕ್ಕೆ ತಾರದೇ ಒಂದು
ಪಕ್ಷದ ಪರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಬಿ.ಇ.ಓ. ಗಣೇಶ್ ರವರು ದಿನಾಂಕ 18-07-2025 ರಂದು ನಡೆದ ಸ್ಕೂಲ್ ಬ್ಯಾಗ್ ಮತ್ತು ಸ್ಪೆಟರ್ ವಿತರಣೆಯನ್ನು
ಕದ್ದುಮುಚ್ಚಿ ಕಾರ್ಯಕ್ರಮ ಮಾಡಿ ಹಂಚಿಕೆ ಮಾಡಿರುತ್ತಾರೆ. ಸರ್ಕಾರದ ಶಿಷ್ಟಾಚಾರದಂತೆ ಸ್ಥಳೀಯರಾದ
ಎಂ.ಎ.ಡಿ.ಬಿ. ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನು ಕಡೆಗಣಿಸಿ
ಬಿಜೆಪಿ ಪಕ್ಷದ ಮುಖಂಡರಿಂದಲೇ ಕಾರ್ಯಕ್ರಮದ ನಿರೂಪಣೆ ಮಾಡಿಸಿ ಅಪಚಾರ ಎಸಗಿರುತ್ತಾರೆ.
ತಾಲ್ಲೂಕಿನ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಶಿಕ್ಷಕರನ್ನು ಹಾದಿತಪ್ಪಿಸಿ ಸರ್ಕಾರದ
ಕಾರ್ಯಕ್ರಮವನ್ನು ಮರೆಮಾಚಿ ಬಿಜೆಪಿ ಮುಖಂಡರ ಅಣತಿಯಂತೆ ಕರ್ತವ್ಯ ನಿರ್ವಹಿಸಿರುವ ಬಿ.ಇ.ಓ. ಗಣೇಶ್
ಇವರನ್ನು ತಕ್ಷಣ ಅಮಾನತು ಪಡಿಸಿ ತನಿಖೆ ನಡೆಸುವಂತೆ ಕೋರುತ್ತೇವೆ.
ನಮ್ಮ ಮನವಿ ಪರಿಗಣಿಸಲು ವಿಳಂಬ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಪಕ್ಷ ಎಚ್ಚರಿಕೆ ನೀಡಿದೆ.
Tags:
ತೀರ್ಥಹಳ್ಳಿ ಸುದ್ದಿ