ಒಂದೇ ಬಾರಿ ಆರು ಮಂದಿ ವೈದ್ಯರು ವರ್ಗಾವಣೆ ಆಗುತ್ತಾರೆ ಎಂಬುದು ತಿಳಿದಿರಲಿಲ್ಲ - ಶಾಸಕ ಆರಗ ಜ್ಞಾನೇಂದ್ರ..!
ವರ್ಗಾವಣೆಗೊಂಡ ವೈದ್ಯರು ಮತ್ತು ನರ್ಸ್ ಗಳಿಗೆ ಗೌರವಿಸಿ ಸನ್ಮಾನ..!
ತೀರ್ಥಹಳ್ಳಿ : ವೈದ್ಯರ ವರ್ಗಾವಣೆ ಆಗುತ್ತದೆ ಎಂಬುದು ತಿಳಿದಿತ್ತು ಆದರೆ ಒಂದೇ ಬಾರಿ ಆರು ಮಂದಿ ವೈದ್ಯರು ವರ್ಗಾವಣೆ ಆಗುತ್ತಾರೆ ಎಂಬುದು ತಿಳಿದಿರಲಿಲ್ಲ. ತೀರ್ಥಹಳ್ಳಿಗೆ ವೈದ್ಯರು ಬರುವುದು ಕಷ್ಟ ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗೆ ಆದಾಗ ಬೈಯುವುದು ಶಾಸಕರಿಗೆ. ಏನೆಲ್ಲಾ ಮಾತು ಕೇಳಬೇಕೋ ಎಂದು ತಿಳಿದಿದ್ದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವರ್ಗಾವಣೆಗೊಂಡ ಆರು ಮಂದಿ ವೈದ್ಯರು ಹಾಗೂ ಆರು ಮಂದಿ ನರ್ಸ್ ಗಳನ್ನು
ಗೌರವಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವೈದ್ಯರ ಕಷ್ಟಗಳು ತುಂಬಾ ಇರುತ್ತದೆ. ಆ ಆದರೆ ನಮ್ಮ ಜನರು 15 ನಿಮಿಷ ಸಹ ಕಾಯುವುದಿಲ್ಲ. ವರ್ಗಾವಣೆಗೊಂಡವರನ್ನು
ಉಳಿಸಿಕೊಳ್ಳಲು ಬಹಳ ಕಷ್ಟಪಟ್ಟೆವು. ಆದರೆ ಅದು ಆಗಿಲ್ಲ.
ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಆ ನಂತರ ಎಷ್ಟೋ ವೈದ್ಯರು ಖಾಸಗಿ ನರ್ಸಿಂಗ್ ಹೋಂ ಮಾಡಿಕೊಂಡಿದ್ದಾರೆ. ಈ ಕಾರಣದಿಂದ ತುಂಬಾ ವರ್ಷ ಇದ್ದವರನ್ನು ವರ್ಗಾವಣೆ ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳಿದಾಗ ಅದನ್ನು ನಾವು ಒಪ್ಪಲೇಬೇಕಾಯಿತು ಎಂದರು.
ಡಾ. ಗಣೇಶ್ ಭಟ್ ಮಾತನಾಡಿ ಯಾವುದೇ ತಾಲೂಕು ಆಸ್ಪತ್ರೆ ಚೆನ್ನಾಗಿರಬೇಕು ಎಂದರೆ ಅಲ್ಲಿನ ಶಾಸಕರು ಆಸ್ಪತ್ರೆಗೆ ಒತ್ತು ಕೊಡಬೇಕು. ವೈದ್ಯರಿಗೆ ಆಗಲಿ ಸಿಬ್ಬಂದಿಗಳು ಆಗಲಿ ನೆಮ್ಮದಿಯಾಗಿ ಇದ್ದರೆ ಮಾತ್ರ ಆಸ್ಪತ್ರೆ ಚನ್ನಾಗಿ ಇರುತ್ತದೆ.
ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಿಗೆ ಸಂಬಳ ಆಗುತ್ತಿಲ್ಲ. ಅವರಿಗೆ ಸರಿಯಾಗಿ ಸಂಬಳ ಆಗದೇ ಕೆಲಸ ಮಾಡಿಲ್ಲ ಎಂದರೆ ಯಾವುದೇ ಆಸ್ಪತ್ರೆ ನಡೆಯುವುದು ಕಷ್ಟವಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಎಲ್ಲರೂ ಸಹ ಒಂದು ಕುಟುಂಬದಂತೆ ಇದ್ದೆವು. ಈಗ ವರ್ಗಾವಣೆ ಆಗಿರುವುದು ಬಹಳ ಬೇಸರ ತರಿಸಿದೆ. ತೀರ್ಥಹಳ್ಳಿ ಜನತೆಗೆ ಈ ಮೂಲಕ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ ಎಂದರು..
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ ಮಾತನಾಡಿ ವೃತ್ತಿ ಧರ್ಮ ಪಾಲಿಸಬೇಕು ಎಂಬುದು ಸರ್ಕಾರಿ ನಿಯಮ ಆದರೆ ಇವರೆಲ್ಲಾ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿ ಜನರ ಪ್ರೀತಿಗಳಿಸಿದ್ದರು. ನಮಗೆ ಎರಡು ವೈದ್ಯರಾದ ಪ್ರಭಾಕರ್ ಹಾಗೂ ಗಣೇಶ್ ಭಟ್ ಅವರ ವರ್ಗಾವಣೆಯಿಂದ ನಿಜವಾಗ್ಲೂ ಅವರ ಸೇವೆ ಕಳೆದುಕೊಂಡಿದ್ದೇವೆ. ಸೈದ್ದಾಂತಿಕವಾಗಿ ನಾವು ಬೇರೆ ಬೇರೆ ಪಕ್ಷದವರು ಆದರೂ ಸಹ ಊರಿಗೆ ತೊಂದರೆ ಆಗುತ್ತದೆ ಎಂದರೆ ಒಂದಾಗುತ್ತೇವೆ. ಅದರಲ್ಲೂ ಆರಗ ಜ್ಞಾನೇಂದ್ರ ಹಾಗೂ ಕಿಮ್ಮನೆ ರತ್ನಾಕರ್ ಅವರು ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಒಂದಾಗಿದ್ದು ನಿಜವಾಗಿಯೂ ತೀರ್ಥಹಳ್ಳಿ ಕ್ಷೇತ್ರಕ್ಕೆ ಒಳ್ಳೆಯ ಸಂಗತಿ ಎಂದರು..
ಹಿರಿಯ ಪತ್ರಕರ್ತರಾದ ಡಾನ್ ರಾಮಣ್ಣ ಮಾತನಾಡಿ
ಜೆ ಸಿ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಯಾಗಿ ಇಲ್ಲದೆ ಖಾಸಗಿ ಆಸ್ಪತ್ರೆ ಹಾಗೆ ಇದೆ ಅದಕ್ಕೆ ಕಾರಣ ಅಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಗಳು. ರೋಗಿಗಳಿಗೆ ಏನು ಹೇಳದೆ ಕಾರ್ಯ ನಿರ್ವಹಿಸಿದ್ದವರು ಹಾಗೆ ಸೆತಸ್ಕೊಪ್ ಬಳಸದೆ ಇದ್ದ ವೈದ್ಯರು ಇದ್ದರು. ನಾವು ಉತ್ತಮವಾಗಿ ಕೆಲಸ ಮಾಡಿದ್ದ ವೈದ್ಯರನ್ನು ನಾವು ಯಾವತ್ತು ಮರೆಯಬಾರದು. ಇಲ್ಲಿಂದ ವರ್ಗಾವಣೆಗೊಂಡಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಹಿರಿಯ ವೈದ್ಯರಾದ ಡಾ. ನಾರಾಯಣ ಸ್ವಾಮಿ ಮಾತನಾಡಿ ನಾನು ತೀರ್ಥಹಳ್ಳಿಗೆ ಬಂದಾಗಿನಿಂದ ಒಂದು ಬ್ಲಡ್ ಬ್ಯಾಂಕ್ ಮಾಡಬೇಕು ಎಂಬುದು ಕನಸಾಗಿತ್ತು. ಆ ಕನಸು ನನಸು ಮಾಡಿದ್ದು ಡಾ. ಗಣೇಶ್ ಭಟ್, ಹಾಗಾಗಿ ಅವರ ಜೊತೆಗಿನ ಸಂಬಂಧ ಅವಿನಾಭಾವ ಸಂಬಂಧ ಆಗಿತ್ತು. ಮೊದಲಿಗೆ ಬ್ಲೆಡ್ ಬೇಕು ಎಂದರೆ ಬಹಳ ಕಷ್ಟವಾಗಿತ್ತು. ಆದರೆ ಈಗ ಬಹಳ ಸುಲಭದ ರೀತಿಯಲ್ಲಿ ಬ್ಲಡ್ ಸಿಗುತ್ತಿದೆ. ಅದಕ್ಕೆ ಬಹಳ ಮುಖ್ಯ ಕಾರಣಕರ್ತರು ಎಂದರೆ ಡಾ. ಗಣೇಶ್ ಭಟ್ ಎಂದರು..
ನರ್ಸ್ ತನುಜಾ ಶೆಟ್ಟಿ ಮಾತನಾಡಿ ನಾವೆಲ್ಲರೂ ತುಂಬಾ ಅನ್ಯೋನ್ಯತೆಯಿಂದ ಕೆಲಸ ಮಾಡುತ್ತಿದ್ದರು. ಯಾವ ನರ್ಸಿಂಗ್ ಹೋಂ ಗಿಂತಲೂ ಯಾವುದಕ್ಕೂ ಕಡಿಮೆ ಇರದ ಆಸ್ಪತ್ರೆ ಜೆ ಸಿ ಆಸ್ಪತ್ರೆ. ಈಗ ನಾವೆಲ್ಲರೂ ವರ್ಗಾವಣೆಯಾಗಿ ಹೋಗುತ್ತಿರುವುದು ಬೇಸರ ತರಿಸಿದೆ. ತೀರ್ಥಹಳ್ಳಿ ಜನತೆಗೆ ತುಂಬಾ ಅಭಾರಿಯಾಗಿದ್ದೇವೆ. ಎಂದಿಗೂ ನಮ್ಮ ಜೊತೆಗೆ ಗಲಾಟೆ ಮಾಡಿಲ್ಲ. ನಿಜವಾಗಿಯೂ ಬೇಸರ ತರಿಸಿದೆ ಎಂದು ಭಾವುಕರಾದರು.
ಡಾ ನಿಶ್ಚಲ್ ಮಾತನಾಡಿ ಇಲ್ಲಿಗೆ ಬಂದು ಸುಮಾರು 23 ವರ್ಷವಾಯಿತು. ಒಂದು ವೈದ್ಯ ವೃತ್ತಿ ಎಂದರೆ ಸುಲಭವಾಗಿರಲ್ಲ. ರಾಮೇಶ್ವರ ಹಾಗೂ ಮಾರಿಕಾಂಬಾ ದೇವರು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ವೈದ್ಯರ ದೋಷ
ರೋಗಿಗಳಿಗೆ ಪ್ರಮಾದ ಆಗುತ್ತದೆ. ನಾನು ಆ ರೀತಿ ಪ್ರಮಾದಗಳು ಆಗಿವೆ. ಆದರೂ ಆ ತಪ್ಪನ್ನು ಕ್ಷಮಿಸಿದ್ದಾರೆ. ಇಲ್ಲಿ ನೀಡಿರುವ ಸಹಕಾರ ಮರೆಯಲು ಸಾಧ್ಯವಿಲ್ಲ.
ಈಗ ಹೊಸ ವೈದ್ಯರು ಬಂದಿದ್ದಾರೆ. ನಮಗೆ ಹೇಗೆ ಸಹಕಾರ ನೀಡಿದ್ದೀರಾ ಹಾಗೆ ಅವರಿಗೂ ಸಹಕಾರ ನೀಡಿ ಎಂದರು..
ಈ ವೇಳೆ ಡಾ. ಗಣೇಶ್ ಭಟ್, ಡಾ. ಪ್ರಭಾಕರ್, ಡಾ. ನಿಶ್ಚಲ್, ಡಾ ಗುರುರಾಜ್, ಡಾ. ರವಿಕುಮಾರ್ ಹಾಗೂ ಡಾ. ಮಹಿಮಾ ಸೇರಿ ಆರು ಮಂದಿ ನರ್ಸ್ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ನಿಖಿಲ್ ಕಾಮತ್ ನಿರೂಪಿಸಿ, ಸೊಪ್ಪುಗುಡ್ಡೆ ರಾಘವೇಂದ್ರ ಸ್ವಾಗತಿಸಿ, ಹೊದಲ ಬಸವರಾಜ್ ವಂದಿಸಿದರು
ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ನಾಗರಾಜ್ ಶೆಟ್ಟಿ, ಮೊಗವೀರ ಸಮಾಜದ ಅಧ್ಯಕ್ಷರು ಶ್ರೀನಿವಾಸ್, ಯೋಗ ಸಮಿತಿ ಗೌರವ ಅಧ್ಯಕ್ಷರು ಡಾ. ಜೀವಂದರ್ ಜೈನ್, ಸರ್ಕಾರಿ ಆಸ್ಪತ್ರೆ ಸಮಿತಿ ಸದಸ್ಯರಾದ ಸುರಭಿ ಕಿಶೋರ್, ನೌಕರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಗೀತಾ ರಮೇಶ್ ಸೇರಿ ಹಲವರು ಉಪಸ್ಥಿತರಿದ್ದರು..
Tags:
ಆರಗ ಜ್ಞಾನೇಂದ್ರ