ತೀರ್ಥಹಳ್ಳಿಯಲ್ಲಿ ಎಗ್ಗಿಲ್ಲದೇ ಮರಳುಗಾರಿಕೆ- ಶಾಲಾ ವಾಹನಕ್ಕೂ ತೊಂದರೆ ಮಾಡುತ್ತಿರುವ ಮರಳು ಲಾರಿಗಳು..!
ಮರಳು ಮಾಫಿಯ ನಡೆಯುತ್ತಿದ್ದರು ತಾಲೂಕು ಆಡಳಿತ ಮೌನ - ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ..!?
ತೀರ್ಥಹಳ್ಳಿ : ತಾಲೂಕಿನಲ್ಲಿ ಎಗ್ಗಿಲ್ಲದೇ ಮರಳು ಮಾಫಿಯ ನಡೆಯುತ್ತಿದ್ದು ಪ್ರತಿದಿನ ಪಟ್ಟಣದ ಅಗ್ರಹಾರ ಸಮೀಪದ ಕ್ವಾರೆಯೊಂದರಿಂದ ಮರಳನ್ನು ಲಾರಿಯಲ್ಲಿ ಹೊಡೆಯಲಾಗುತ್ತಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಲಾರಿಗಳು ಮರಳು ತೆಗೆದುಕೊಂಡು ಹೋಗುತ್ತಿವೆ. ವಿಪರೀತ ವೇಗದ ಮರಳು ಮಾಫಿಯಕ್ಕೆ ಅಮಾಯಕರು ಬಲಿ ಪಡೆಯಬೇಕಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಮರಳು ತುಂಬಿದ ಲಾರಿಗಳು ಅಗ್ರಹಾರ ರಸ್ತೆಯಲ್ಲಿ ಸಂಚಾರಿಸುತ್ತಿದ್ದು ಬೆಳಗ್ಗೆ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಶಾಲಾ ವಾಹನಗಳಿಗೆ ಇದರಿಂದ ತೀವ್ರ ತರದ ಸಮಸ್ಯೆ ಆಗುತ್ತಿದೆ. ಏಕಏಕಿ ನಮ್ಮದೇ ರಸ್ತೆ ನಾವೇ ಮಾಡಿರುವ ರಸ್ತೆ ಎಂಬಂತೆ ನುಗ್ಗುವ ಲಾರಿಗಳು ಶಾಲಾ ವಾಹನವನ್ನು ಲೆಕ್ಕಿಸದೆ ಹೋಗುತ್ತಿವೆ. ಇದರಿಂದ ಶಾಲಾ ವಾಹನದ ಡ್ರೈವರ್ ಗಳು ಭಯ ಭೀತರಾಗಿದ್ದಾರೆ. ಇವರ ಅತ್ಯಂತ ವೇಗದಿಂದ ನಮ್ಮ ಶಾಲಾ ಮಕ್ಕಳಿಗೆ ತೊಂದರೆ ಆಗುವುದೇನೋ ಎಂಬ ಭಯವನ್ನು ಚಾಲಕರು ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಮರಳು ಸಾಗಾಟ ಆಗುತ್ತಿದ್ದರು ತಾಲೂಕು ಆಡಳಿತ ಮೌನ ವಹಿಸಿದೆ. ಇನ್ನು ಪೊಲೀಸ್ ಇಲಾಖೆ ಹಾಗೂ ಭೂ ವಿಜ್ಞಾನ ಇಲಾಖೆ ಕಣ್ಮುಚ್ಚಿ ಕುಳಿತಂತೆ ಕಾಣಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣದ ಆಸೆಯಿಂದ ಅಧಿಕಾರಿಗಳು, ರಾಜಕಾರಣಿಗಳು, ಪೊಲೀಸರು ಸಹ ಇದಕ್ಕೆ ಅನುಮತಿ ನೀಡಿದ್ದಾರೆ ಎಂಬ ಅನುಮಾನ ಇದೆ. ಈ ಮರಳು ಮಾಫಿಯದ ಅತೀ ವೇಗದ ಲಾರಿಗಳಿಂದ ಯಾರಿಗಾದರೂ ತೊಂದರೆ ಆದರೆ ಅದಕ್ಕೆ ಹೊಣೆ ಯಾರು..? ಎಂಬ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆಯ ಮೌನಕ್ಕೆ ಉತ್ತರ ಯಾರು ಕೊಡುತ್ತಾರೆ ಕಾದು ನೋಡಬೇಕಿದೆ...