ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಶಾಲೆ ಕಟ್ಟಡದಲ್ಲಿ ಬಿರುಕು!
ಎಪ್ಪತ್ತು ವರ್ಷ ಇತಿಹಾಸ ಇದ್ದ ಶಾಲೆ ಕುಸಿತವಾಗುವ ಭಯ..!
ತಲೆ ಮೇಲೆ ಬೀಳುತ್ತಿದೆ ಇಟ್ಟಿಗೆ ಪುಡಿಗಳು..!
ತೀರ್ಥಹಳ್ಳಿ : ಆರಿದ್ರಾ ಮಳೆಯ ಅಬ್ಬದಿಂದ ಹಾಗೂ ಅತೀ ವೇಗವಾಗಿ ಬೀಸುವ ಗಾಳಿಯಿಂದ ಸುಮಾರು ಎಪ್ಪತ್ತು ವರ್ಷ ಇತಿಹಾಸವಿದ್ದ ಸರ್ಕಾರಿ ಶಾಲೆಯ ಕಟ್ಟಡದ ಒಳಭಾಗದಲ್ಲಿ ಗೋಡೆಗಳು ಬಿರುಕು ಬಿಟ್ಟು, ಅಲ್ಲಲ್ಲಿ ಇಟ್ಟಿಗೆ ಸಮೇತ ಪುಡಿ ಪುಡಿಯಾಗಿ ಬಿದ್ದಿದೆ. ಸಂಪೂರ್ಣ ಕುಸಿದು ಬೀಳುವ ಸಾಧ್ಯತೆ ಇದ್ದು ಈ ಬಗ್ಗೆ ಜಾಗ್ರತೆ ವಹಿಸಬೇಕಿದೆ.
ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ತೆಮ್ಮೆಮನೆ ಶಾಲೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಹಳೆಯ ಅಕ್ಷರ ದಾಸೋಹ ಕೊಠಡಿ ಸಂಪೂರ್ಣ ಬಿರುಕು ಬಿಟ್ಟು ಇನ್ನೇನು ಬೀಳುವ ಸ್ಥಿತಿಯಲ್ಲಿದೆ. ಹಾಗೊಂದು ವೇಳೆ ಕಟ್ಟಡ ಕುಸಿದು ಬಿದ್ದರೆ ಕೆಳಗಡೆ ಇರುವ ಅಂಗನವಾಡಿಗೆ ಹನಿಯಾಗಲಿದ್ದು ದೊಡ್ಡ ಅಪಾಯ ಕಾದಿರುವುದಂತೂ ಸತ್ಯ.
ಶಾಲೆಯ ಉಳಿವಿಗೆ ಸೂಕ್ತ ಕ್ರಮ ಜರುಗಿಸುವುದು ಅಗತ್ಯವಾಗಿದೆ. ಈ ವಿಚಾರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಿರೀಶ್ ಗೌಡ ತೈರೋಳ್ಳಿ ಹಾಗೂ ಮುಖ್ಯ ಶಿಕ್ಷಕರಾದ ಪ್ರಭಾಕರ್ ಇವರು ನಾಲೂರು ಗ್ರಾಮ ಪಂಚಾಯಿತಿಯವರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿ ಆರ್ ಪಿ ಯವರ ಗಮನಕ್ಕೆ ತಂದಿದ್ದಾಗಿ ತಿಳಿಸಿದ್ದಾರೆ.
ಈ ಬಗ್ಗೆ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಪಡೆದು ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಶಾಲೆ ಸರಿಪಡಿಸಿಕೊಡುವಂತೆ ಶಾಸಕರು ಹಾಗೂ ಶಿಕ್ಷಣ ಸಚಿವರಿಗೆ ತೆಮ್ಮೆಮನೆ ಶಾಲೆಯ ಮಕ್ಕಳು ಮನವಿ ಮಾಡಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ