ಪ್ರತಿ ಊರಲ್ಲೂ ಮಂಜುನಾಥ್ ಪಾರ್ಥೀವ ಶರೀರಕ್ಕೆ ಸಾರ್ವಜನಿಕರಿಂದ ಗೌರವ
ಶಿವಮೊಗ್ಗ : ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ ಸರಿ ಸುಮಾರು 9 ರಿಂದ 10 ಗಂಟೆಯ ವೇಳೆಗೆ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಬೆಳಿಗ್ಗೆ 5-30 ರ ಸಮಯದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಚಿತ್ರದುರ್ಗದ ಮಾರ್ಗವಾಗಿ ಪಾರ್ಥೀವ ಶರೀರ ಮತ್ತು ಅವರ ಪತ್ನಿ ಪಲ್ಲವಿ ಮತ್ತು ಮಗ ವಾಹನದಲ್ಲಿ ಹೊರಟಿದ್ದಾರೆ. ಅಂಬ್ಯೂಲೆನ್ಸ್ ನಲ್ಲಿ ಮಂಜುನಾಥ್ ರವರ ಪಾರ್ಥೀವ ಶರೀರವಿದ್ದರೆ ಕಾರಿನಲ್ಲಿ ಪತ್ನಿ ಮತ್ತು ಮಗ ಹೊರಟಿದ್ದಾರೆ.
ಪ್ರತಿಯೊಂದು ಊರಿನಲ್ಲೂ ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಸಾರ್ವಜನಿಕರು ಹೂವಿನ ಹಾರ ಹಾಕಿ ಗೌರವ ಸಮರ್ಪಿಸುತ್ತಿದ್ದಾರೆ. ಬೆಳಗ್ಗೆ 6-45 ಕ್ಕೆ ಪಾರ್ಥೀವ ಶರೀರವನ್ನ ಹೊತ್ತ ವಾಹನ ತುಮಕೂರಿನಿಂದ ಹೊರಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗಕ್ಕೆ ಪಾರ್ಥೀವ ಶರೀರ ಪ್ರವೇಶಿಸುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಮಂಜುನಾಥ್ ಅವರ ಮನೆಯವರೆಗೆ ಬೈಕ್ ರ‌್ಯಾಲಿ ನಡೆಯಲಿದ್ದು ನಂತರ ಮನೆಯಲ್ಲಿ ಪಾರ್ಥೀವ ಶರೀರವನ್ನ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ.
ಮಧ್ಯಾಹ್ನದ ನಂತರ ಪಾರ್ಥೀವ ಶರೀರವನ್ನ ಪಾದಯಾತ್ರೆ ಮೂಲಕ ನಗರದ ತುಂಗಾ ನದಿಯಲ್ಲಿರುವ ರೋಟರಿ ಚಿತಾಗಾರಕ್ಕೆ ಬಂದು ಆ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ.
