ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್‌ಗೌಡ ಬಂಧನ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ನೀಡುವ ಬಂಧನಕ್ಕೆ ಕಾರಣಗಳ ಸಮರ್ಥನೀಯ ಮೌಲ್ಯವನ್ನು ಪರಿಶೀಲಿಸುವುದಕ್ಕೆ ಸಾಂವಿಧಾನಿಕ ನ್ಯಾಯಾಲಯಗಳಿಗೆ (ಹೈಕೋರ್ಟ್) ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಜಾರಿ ನಿರ್ದೇಶನಾಲಯ ಬಂಧಿಸುವ ಸಂದರ್ಭದಲ್ಲಿ ಅನುಸರಿಸಿದ ಕಾರ್ಯವಿಧಾನ ಪ್ರಶ್ನಿಸಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ) ಬ್ಯಾಂಕ್ನ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ್‌ಗೌಡ ಮತ್ತವರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ, ಅಲ್ಲದೆ, ಅರ್ಜಿದಾರರ ಬಂಧನವು ಊಹಾತ್ಮಕವಾಗಿದೆ ಎನ್ನಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ
ಅಲ್ಲದೆ, ಪಿಎಂಎಲ್‌ಎ ಮತ್ತು ಕಾನೂನು ಬಾಹಿರ ಚಟುವಟಿಕೆಗಳ(ತಡೆ)ಕಾಯಿದೆಯಂತೆ ಪ್ರಕರಣಗಳಲ್ಲಿ ಬಂಧಿಸುವ ಸಂದರ್ಭಗಳಲ್ಲಿ ಕಾರಣಗಳನ್ನು ನೀಡಬೇಕು ಎಂಬ ಅಂಶ ಕಡ್ಡಾಯವಾಗಿದೆ. ಆದರೂ, ಅಂತಹ ಬಹಿರಂಗಪಡಿಸುವಿಕೆ ಅನಿವಾರ್ಯವಾಗಿದ್ದರೂ ಸಾಂವಿಧಾನಿ ನ್ಯಾಯಾಲಯಗಳು(ಹೈಕೋರ್ಟ್) ಮೇಲ್ಮನವಿ ನ್ಯಾಯಮಂಡಳಿಗಳಾಗಿ ಪರಿವರ್ತಿಸುವುದಕ್ಕೆ ಸಾಧ್ಯವಿಲ್ಲ. ಬಂಧನಕ್ಕೆ ನೀಡಿರುವ ಕಾರಣದ ಪ್ರತಿಯೊಂದು ಅಂಶವನ್ನು ಪರಿಶೀಲಿಸುವುದು ಮತ್ತು ವಿಶ್ಲೇಷಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಅಕ್ರಮದ ಹಣ ಕೋಟ್ಯಂತರ ರು.ಗಳಾಗಿದ್ದು, ಮೇಲ್ನೋಟಕ್ಕೆ ಅರ್ಜಿದಾರ ಮಂಜುನಾಥ್‌ಗೌಡ ಅವರು ಪ್ರಕರಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮರೆಮಾಚಲು ಪ್ರಯತ್ನಿಸುತ್ತಿದ್ದು, ಅಕ್ರಮ ಹಣವನ್ನು ಕಳಂಕರಹಿತದ್ದಾಗಿದೆ ಎಂಬುದಾಗಿ ಬಿಂಬಿಸುತ್ತಿದ್ದಾರೆ. ಜತೆಗೆ, ಅರ್ಜಿದಾರರ ಪತ್ನಿ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬುದನ್ನು ಇಡಿ ಸ್ಪಷ್ಟವಾಗಿ ವಿವರಗಳನ್ನು ನೀಡಿದೆ. ಅಲ್ಲದೆ, ಖಾತೆದಾರರಿಗೆ ತಿಳಿಯದಂತೆ 784 ನಕಲಿ ಚಿನ್ನದ ಸಾಲದ ಖಾತೆಗಳನ್ನು ಪ್ರಾರಂಭಿಸಿರುವ ಅಂಶ ಗೊತ್ತಾಗಿದ್ದು, ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ ಏನು??
ಏಪ್ರಿಲ್ 9ರಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಬ್ಯಾಂಕ್‌ನಲ್ಲಿ 69.77 ಕೋಟಿ ರು.ಗಳ ಮೌಲ್ಯದ ಚಿನ್ನದ ಸಾಲ ನೀಡಿದ ಆರೋಪದಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್‌ಗೌಡ ಅವರನ್ನು ಇಡಿ ಬಂಧಿಸಿತ್ತು. ಚಿನ್ನದ ಮೇಲಿನ ಸಾಲ ನೀಡಿಕೆಯಲ್ಲಿ ಅಕ್ರಮ ನಡೆದಿದ್ದು, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸುವುದಾಗಿ ತಿಳಿಸಿತ್ತು. ಈ ಬಂಧನ ಪ್ರಕ್ರಿಯೆಯಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸಿಲ್ಲ ಎಂದು ಆರೋಪಿಸಿ ಮಂಜುನಾಥ್‌ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಂಜುನಾಥ್‌ಗೌಡರನ್ನು ಬಂಧಿಸುವ ಸಂದರ್ಭದಲ್ಲಿ ನೀಡಿರುವ ಕಾರಣಗಳು ಸಂಪೂರ್ಣ ತಪ್ಪಾಗಿವೆ. ಆ ಕಾರಣಗಳು ಪೂರ್ವ ನಿಯೋಜಿತ ಅಪರಾಧಗಳಿಗೆ ಸಂಬಂಧಿಸಿಲ್ಲ. ಮಂಜುನಾಥ್ ಗೌಡ ಮತ್ತವರ ಪತ್ನಿ ಈ ಅಕ್ರಮದಿಂದ ಲಾಭ ಪಡೆದಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂಬುದಾಗಿ ವಾದ ಮಂಡಿಸಿದ್ದರು.
