ಶಾಂತಿ ಮಾತುಕತೆಯ ಬಗ್ಗೆ ಕೇಳುವ ಯಾವುದೇ ನೈತಿಕತೆ ಮುಖ್ಯಮಂತ್ರಿಗಳಿಗೆ ಇಲ್ಲ - ಬಿ ವೈ ರಾಘವೇಂದ್ರ BYR

ಶಾಂತಿ ಮಾತುಕತೆಯ ಬಗ್ಗೆ ಕೇಳುವ ಯಾವುದೇ ನೈತಿಕತೆ ಮುಖ್ಯಮಂತ್ರಿಗಳಿಗೆ ಇಲ್ಲ - ಬಿ ವೈ ರಾಘವೇಂದ್ರ







ತೀರ್ಥಹಳ್ಳಿ : ರಾಜ್ಯ ರಾಜಕಾರಣದಿಂದ ಕೇಂದ್ರ ಹಾಗೂ ರಾಷ್ಟ್ರಮಟ್ಟದ ರಾಜಕಾರಣಕ್ಕೆ ಹೋಗುವ ಆಸಕ್ತಿಯಿಂದ ಪ್ರಧಾನ ಮಂತ್ರಿಗಳ ವ್ಯಕ್ತಿತ್ವವನ್ನು ಟೀಕೆ ಮಾಡಿದರೆ ಮಾಧ್ಯಮಗಳ ಮೂಲಕ ವಿಜೃಂಭಿಸಬಹುದು ಎಂಬ ಅನಿಸಿಕೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರದ್ದಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 

ಭಾನುವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳಷ್ಟೇ ಅಲ್ಲದೆ ಮಂತ್ರಿಯಾಗಿರುವ ಸಂತೋಷ್  ಲಾಡ್ ಸಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಅವರು ಸ್ವತಃ ಜಮ್ಮುಕಾಶ್ಮೀರದಲ್ಲಿ ಪಹಲ್ಗಾಂವ್ ಗೆ ಹೋಗಿ ಬಂದವರು. ಅಲ್ಲಿನ ಪರಿಸ್ಥಿತಿ ವಾತಾವರಣವನ್ನು ಅರಿತವರು. ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಫಲತೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಪ್ರಚಾರಕ್ಕಾಗಿ ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

 

ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿಯಾದ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಪಾಕಿಸ್ಥಾನದವರನ್ನು ಹೊರ ಹೋಗುವಂತೆ ಆದೇಶಿಸಲಾಗಿದೆ. ಇಂತಹ ನೋವಿನ ಸಂಗತಿಯಲ್ಲೂ ಕಾಂಗ್ರೆಸ್ ಪಕ್ಷದ ನಾಯಕರಾದ ರಾಬರ್ಟ್ ವಾದ್ರಾವರು ಹಿಂದುತ್ವಕ್ಕೆ ಅತಿಯಾದ ಆದ್ಯತೆ ಕೊಟ್ಟ ಕಾರಣದಿಂದಾಗಿ ಮುಸ್ಲಿಂ ಭಾಂದವರಿಗೆ ನೋವಾಗಿದೆ ಎಂಬ ಹೇಳಿಕೆ ಸರಿಯಲ್ಲ. ಹಾಗೆಯೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಭದ್ರತಾ ಲೋಪದ ಬಗ್ಗೆ ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಶಾಂತಿ ಮಾತುಕತೆಯ ಬಗ್ಗೆ ಕೇಳುವ ಯಾವುದೇ ನೈತಿಕತೆ ಮುಖ್ಯಮಂತ್ರಿಗಳಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. 

ಸಿಖ್ ರ ಮೇಲೆ ದಾಳಿ ಮಾಡಿದ್ದೂ ನೀವು ಆ ಸಂದರ್ಭದಲ್ಲಿಯೂ ನರಮೇಧವಾಗಿತ್ತು. ಆ ಸಂದರ್ಭದಲ್ಲಿ ನಿಮ್ಮ ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿ ತಂದು ಬೇಳೆ ಬೇಯಿಸಿಕೊಂಡ ಪಕ್ಷ ನಿಮ್ಮದು. ಬೆಂಗಳೂರಿನ ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ. ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರನ್ನು ನಿಮ್ಮ ಸರ್ಕಾರ ಬಂದ ನಂತರ ಅವರ ಕೇಸ್ ಮುಚ್ಚಿ ಹಾಕಿರುವುದು, ಹುಬ್ಬಳ್ಳಿ ಯಲ್ಲಿ ನಡೆದ ಗಲಭೆ ಪ್ರಕರಣದಂತಹ ಹಲವಾರು ಪ್ರಕರಣಗಲ್ಲಿ ಕ್ರಿಮಿನಲ್ ಗಳನ್ನು ಬಿಡಿಸುವಂತಹ ಕೆಲಸಗಳನ್ನು ನಿಮ್ಮ ಸರ್ಕಾರ ಮಾಡಿದೆ. ಈ ರೀತಿಯ ಆಡಳಿತದ ತಪ್ಪಿನಿಂದಲೇ ಜಮ್ಮು ಕಾಶ್ಮೀರದಲ್ಲಿ ಭಯಾನಕ ಘಟನೆ ನಡೆದಿದೆ ಎಂದರು. 

ಪಾಕಿಸ್ತಾನ ದ ವಿರುದ್ಧ ಈಗಾಗಲೇ ಯುದ್ಧಕ್ಕೆ ತಯಾರಿ ನಡೆಯುತ್ತಿದೆ. ಈಗಾಗಲೇ ಪಾಕಿಸ್ತಾನಕ್ಕೆ ಯಾವ ಭಾಷೆಯಲ್ಲಿ ಉತ್ತರ ನೀಡಬೇಕೋ ಅದೇ ರೀತಿಯಲ್ಲಿ ಉತ್ತರ ನೀಡಲಾಗಿದೆ. ಈ ಘಟನೆಗೆ ಇಡೀ ದೇಶವೇ ಪ್ರತಿಭಟನೆ ನಡೆಸಿದೆ. ಮೋದಿಜಿಯವರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ನೂರಕ್ಕೆ ನೂರರಷ್ಟು ಇದಕ್ಕೆ ಸರಿಯಾದ ಉತ್ತರವನ್ನು ಪಾಕಿಸ್ತಾನ ಕ್ಕೆ ಕೊಡುವ ಸಮಯ ದೂರವಿಲ್ಲ ಎಂದರು.





Previous Post Next Post