ಎಂಎಲ್​ಸಿ ಹೆಸರಿನಲ್ಲಿ ವೈದ್ಯರಿಗೆ ವಿಷಪೂರಿತ ಸ್ವೀಟ್ಸ್​ ಕಳುಹಿಸಿದ್ದ ಮಾನಸಿಕ ರೋಗಿ ಅರೆಸ್ಟ್​​ crime

 ಎಂಎಲ್​ಸಿ ಹೆಸರಿನಲ್ಲಿ ವೈದ್ಯರಿಗೆ ವಿಷಪೂರಿತ ಸ್ವೀಟ್ಸ್​ ಕಳುಹಿಸಿದ್ದ ಮಾನಸಿಕ ರೋಗಿ ಅರೆಸ್ಟ್​​




ಶಿವಮೊಗ್ಗ : ವಿಧಾನಪರಿಷತ್​ ಸದಸ್ಯ ಡಾ. ಧನಂಜಯ ಸರ್ಜಿ  ಹೆಸರಿನಲ್ಲಿ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಷಪೂರಿತ ಸ್ವೀಟ್ ಬಾಕ್ಸ್​ಗಳನ್ನು  ಡಿಟಿಡಿಸಿ ಕೋರಿಯರ್​ ಮೂಲಕ ಕಳುಹಿಸಿದ್ದ ಆರೋಪಿಯನ್ನು ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 


ಸೌಹಾರ್ದ ಪಟೇಲ್ ಬಂಧಿತ ಆರೋಪಿ. ಮಾನಸಿಕ ರೋಗಿಯಾಗಿರುವ ಸೌಹಾರ್ದ ಪಟೇಲ್​ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ‌ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಸೌಹಾರ್ದ ಪಟೇಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ.


ಭದ್ರಾವತಿ ನಿವಾಸಿಯಾಗಿರುವ ಆರೋಪಿ ಸೌಹಾರ್ದ ಪಟೇಲ್ ಧನಂಜಯ್​ ಸರ್ಜಿ ಹೆಸರಿನಲ್ಲಿ ಶಿವಮೊಗ್ಗ ನಗರ ನಿವಾಸಿಗಳಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಅರವಿಂದ್ ಮತ್ತು ಕೆ ಎಸ್ ಪವಿತ್ರಾ ಅವರಿಗೆ ವಿಷಪೂರಿತ ಸ್ವೀಟ್​ ಬಾಕ್ಸ್​ ಕಳುಹಿಸಿದ್ದನು.


ಮಾತ್ರೆ ಪುಡಿ ಮಾಡಿ ಸ್ವೀಟ್​ನಲ್ಲಿ ಮಿಶ್ರಣ ಮಾಡಿದ್ದ ಸೌಹಾರ್ದ ಪಟೇಲ್​


ಸೌಹಾರ್ದ ಪಟೇಲ್ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಪದವಿ ಪಡೆದಿದ್ದಾನೆ. ಸೌಹಾರ್ದ ಪಟೇಲ್ ಎಲ್​ಎಲ್​ಬಿ ಓದುವಾಗ ತನ್ನದೇ ಕಾಲೇಜಿನ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದನು. ಈ ವಿಚಾರ ತಿಳಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಯುವತಿಯನ್ನು ಸೌಹಾರ್ದ ಪಟೇಲ್​ನಿಂದ ದೂರ ಮಾಡಿದ್ದರು.


ಇದರಿಂದ ಸೌಹಾರ್ದ​​ ಪಟೇಲ್​ ಡಿಪ್ರೆಶನ್​ಗೆ ಹೋಗಿದ್ದನು. ಹೀಗಾಗಿ, ಸೌಹಾರ್ದ ಪಟೇಲ್​ಗೆ ಮಾನಸಿಕ ರೋಗ ತಜ್ಞರಾದ ಅರವಿಂದ್ ಮತ್ತು ಕೆಎಸ್ ಪವಿತ್ರಾ ಬಳಿ ಚಿಕಿತ್ಸೆ ಪಡೆಯುತ್ತಿದ್ದನು. ಮಾನಸಿಕ ರೋಗಿಯಾಗಿದ್ದ ಹಿನ್ನೆಲೆ ಸೌಹಾರ್ದ ಪಟೇಲ್​ನನ್ನು ತೊರೆದು ಆತನ ತಂದೆ-ತಾಯಿ ಬೇರೆಡೆ ವಾಸಿಸುತ್ತಿದ್ದರು.


ಮಾತ್ರೆಗಳ ಮೇಲೆ ಮಾತ್ರೆಗಳನ್ನು ಕೊಟ್ಟು ತನ್ನನ್ನು ರೋಗಿಯನ್ನಾಗಿಸಿದ ವೈದ್ಯರ ಮೇಲೆ ಸೌಹಾರ್ದ ಪಟೇಲ್ ಸಿಟ್ಟಾಗಿದ್ದನು. ಇದೇ ಸಿಟ್ಟಿನಲ್ಲಿ ಮಾತ್ರೆಗಳನ್ನು ಪುಡಿಮಾಡಿ ಸ್ವೀಟ್​ನಲ್ಲಿ ಮಿಶ್ರಣ ಮಾಡಿ ಎಂಎಲ್​ಸಿ ಧನಂಜಯ ಸರ್ಜಿ ಹೆಸರಿನಲ್ಲಿ ಕೋರಿಯರ್ ಮೂಲಕ​ ಕಳುಹಿಸಿದ್ದನು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.


ಏನಿದು ಘಟನೆ?


ಹೊಸವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ವಿಧಾನಪರಿಷತ್​ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಷಪೂರಿತ ಸ್ವೀಟ್ ಬಾಕ್ಸ್​ಗಳನ್ನು ಕೋರಿಯರ್​ ಮೂಲಕ ಕಳುಹಿಸಲಾಗಿತ್ತು.


ಸ್ವೀಟ್​​ ಅನ್ನು ಒಬ್ಬರು ಇದನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಗಂಡಾಂತರ ತಪ್ಪಿದಂತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಂಎಲ್​ಸಿ ಧನಂಜಯ ಸರ್ಜಿ ಅವರು ಸ್ವೀಟ್​​ ಅನ್ನು ಲ್ಯಾಬ್​ಗೆ ರವಾನೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ

Previous Post Next Post