ಗೋಶಾಲೆಯನ್ನು ನಡೆಸಲು ಕಾಂಗ್ರೆಸ್ ಬಳಿ ಹಣವಿಲ್ಲ - ಆರಗ ವಾಗ್ದಾಳಿ
ತೀರ್ಥಹಳ್ಳಿ : ಗೋ ಶಾಲೆ ಆರಂಭ ಮಾಡುವ ಬಗ್ಗೆ ನಿನ್ನೆ ಕ್ಯಾಬಿನೆಟ್ ನಲ್ಲಿ ನಿರ್ಣಯವನ್ನ ತೆಗೆದುಕೊಂಡಿರುವುದು ನೋಡಿದರೆ ತುಂಬಾ ಆಶ್ಚರ್ಯವಾಗುತ್ತಿದೆ. ಗೋ ಶಾಲೆಗಳಿಗೆ ಗೋವುಗಳು ಬರುತ್ತಿಲ್ಲ. ಆ ಕಾರಣಕ್ಕೆ ಆರಂಭದ ಬಗ್ಗೆ ಅವಶ್ಯಕತೆ ಇಲ್ಲ ಅದನ್ನು ನಿಲ್ಲಿಸಿದ್ದೇವೆ ಎಂದು ಹೇಳುತ್ತಾರೆ. ಹುಚ್ಚು ಬಿಡುವ ತನಕ ಮದುವೆಯಾಗುವುದಿಲ್ಲ ಮದುವೆ ಆಗುವ ತನಕ ಹುಚ್ಚು ಬಿಡುವುದಿಲ್ಲ ಎಂಬ ಗಾದೆ ಮಾತಿದೆ. ಇವರು ಗೋಶಾಲೆಗಳನ್ನು ಆರಂಭ ಮಾಡದೆ ಗೋವುಗಳು ಹೇಗೆ ಬರುತ್ತವೆ ಎಂದು ಶಾಸಕ ಆರಗ ಜ್ಞಾನೇಂದ್ರ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ .
ಶುಕ್ರವಾರ ತೀರ್ಥಹಳ್ಳಿಯಲ್ಲಿ ಮಾತನಾಡಿರುವ ಅವರು ಇವರ ಸರ್ಕಾರ ಬಂದ ಮೇಲೆ ಗೋಶಾಲೆಯನ್ನೇ ಆರಂಭ ಮಾಡಿಲ್ಲ. ನಾವು ಜಿಲ್ಲೆಗೊಂದು ಗೋಶಾಲೆ ಎಂದು ಬಿಜೆಪಿ ಸರ್ಕಾರದಲ್ಲಿ ಏನು ಮಾಡಿದ್ದೆವೋ ಅವುಗಳನ್ನೆಲ್ಲವನ್ನು ರದ್ದು ಮಾಡಿದ್ದಾರೆ. ಗೋಶಾಲೆಯನ್ನು ನಡೆಸಲು ಇವರ ಬಳಿ ಹಣವಿಲ್ಲ, ಗ್ಯಾರೆಂಟಿ ಯೋಜನೆಯನ್ನ ಅನುಷ್ಠಾನಕ್ಕೆ ತರಲು ಹೋಗಿ ಯಾವುದನ್ನು ನಡೆಸಲಾಗದೆ ಸರ್ಕಾರ ಕೈ ಚೆಲ್ಲಿದೆ ಎಂದರು.
ಬಸ್ ಚಾರ್ಜ್ ಕೂಡ ಇಂದಿನಿಂದ ಜಾಸ್ತಿ ಮಾಡಲಾಗಿದೆ. ಸರ್ಕಾರ ಹತಾಶೆಯ ಸ್ಥಿತಿ ತಲುಪಿದೆ ಹಾಗೂ ಖಜಾನೆಯನ್ನ ಲೂಟಿ ಹೊಡೆದು ಖಾಲಿ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಮಾಡಲು ಅವರ ಬಳಿ ಹಣವಿಲ್ಲ. ಹೊಸನಗರದ ಜಯನಗರ ಬಳಿ ಇರುವ ಗೊರಗೋಡಿನಲ್ಲಿ ಗೋಶಾಲೆ ಮಾಡಲು ಗುದ್ದಲಿ ಪೂಜೆ ಮಾಡಿದ್ದೆವು. ಆದರೆ ಇವರ ಸರ್ಕಾರ ಬಂದ ನಂತರ ಅದನ್ನು ಆರಂಭ ಮಾಡಿಲ್ಲ. ಅಧಿಕಾರಿಗಳು ಸಹ ಸುಳ್ಳುನ್ನ ಹೇಳುತ್ತಿದ್ದಾರೆ ಎಂದರು.
ಸರ್ಕಾರ ಗೋವುಗಳ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ . ತಕ್ಷಣವೇ ಗೋಶಾಲೆಯನ್ನ ಪ್ರಾರಂಭ ಮಾಡಬೇಕು. ಬೀದಿಯಲ್ಲಿ ಮಲಗುವಂತಹ ಗೋವುಗಳನ್ನು ಸಾಕುವಂತಹ ಕೆಲಸ ಆಗಬೇಕು. ಕಟುಕರ ಕೈಗೆ ಜಾನುವಾರುಗಳು ಸಿಗದ ರೀತಿಯಲ್ಲಿ ನೋಡಿಕೊಳ್ಳುವ ಕೆಲಸ ಸರ್ಕಾರ ಮಾಡಬೇಕು ಎಂದರು
