ಹಣಗೆರೆಕಟ್ಟೆ ದೇವಸ್ಥಾನದ ಹುಂಡಿ ಎಣಿಕೆಯಲ್ಲಿ ಮೋಸವಾಗಿದ್ದು ಬಹಿರಂಗ!
ಹೆಚ್ಚುವರಿಯಾಗಿ ಸಿಕ್ಕ ಹಣವೇಷ್ಟು ಗೊತ್ತಾ?
ತೀರ್ಥಹಳ್ಳಿ : ತಾಲೂಕಿನ ಭಾವೈಕ್ಯತೆ ಕೇಂದ್ರವಾಗಿರುವ ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ಮೋಸ ನಡೆದಿದೆ ಎಂಬ ದೂರು ಬಂದ ಕಾರಣ ಇಂದು (ಶುಕ್ರವಾರ) ನಡೆದ ಮರು ಎಣಿಕೆಯಲ್ಲಿ ಹೆಚ್ಚುವರಿ 77 ಸಾವಿರ ಹಣ ಸಿಕ್ಕಿದ್ದು ಹಾಗಾದ್ರೆ ನಿಜವಾಗಿಯೂ ಗುರುವಾರ ಎಣಿಕೆ ಸಂದರ್ಭದಲ್ಲಿ ಮೋಸವಾಗಿರುವುದು ಬಹಿರಂಗಗೊಂಡಿದೆ.
ಗುರುವಾರ ಹುಂಡಿಯ ಹಣ ಎಣಿಕೆಯಲ್ಲಿ ಮೋಸ ನಡೆದಿದೆ ಎಂದು ಹಣಗೆರೆಕಟ್ಟೆ ದೇವಸ್ಥಾನದ ಆಡಳಿತ ಮಂಡಳಿ ತಹಶೀಲ್ದಾರ್ ಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಗುರುವಾರವೇ ಮೇಲ್ನೋಟಕ್ಕೆ ಹಣದ ಕಂತುಗಳನ್ನು ಎಣಿಸಿದಾಗ ಹೆಚ್ಚುವರಿ ನೋಟುಗಳು ಕಂಡು ಬಂದಿದ್ದವು. ನಂತರ ಆ ಹಣವನ್ನು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಡಲಾಗಿತ್ತು.
ಇಂದು ಶುಕ್ರವಾರ ಬೆಳಗ್ಗೆ ತಹಶೀಲ್ದಾರ್, ಡಿವೈಎಸ್ಪಿ ಸಮ್ಮುಖದಲ್ಲಿ ಬಿಗಿ ಬಂದೋಬಸ್ತ್ ಮೂಲಕ ಹಣವನ್ನು ಹಣಗೆರೆಕಟ್ಟೆಯ ದೇವಸ್ಥಾನಕ್ಕೆ ಸಾಗಿಸಿ ಮರು ಎಣಿಕೆ ನಡೆಸಲಾಯಿತು.
ಒಟ್ಟು 66 ಲಕ್ಷದ 4 ಸಾವಿರದ 950 ರೂ ಹಣ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಎಣಿಕೆ ಮಾಡದೆ ಹೆಚ್ಚುವರಿಯಾಗಿ ಉಳಿಸಿಟ್ಟಿದ್ದ 77,930 ರೂಪಾಯಿ ಹಣದ ಕೃತ್ಯ ಇಂದು ಬಯಲಾಗಿದೆ. ಈ ಸಂಬಂಧ ತಹಶೀಲ್ದಾರ್ ತನಿಖೆ ಆರಂಭಿಸಿದ್ದು ಪ್ರಕರಣ ವಿವಾದಕ್ಕೆ ತಿರುಗಿದೆ. ಆಡಳಿತ ಮಂಡಳಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತಕರಿಗೆ ದೂರು ನೀಡಲು ನಿರ್ಧರಿಸಿದೆ.
ಇಂತಹ ಕೃತ್ಯ ನಡೆಸಿದ ಹಾಗೂ ಅದಕ್ಕೆ ಸಹಕಾರ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದು, ಇಲ್ಲಿಯವರೆಗೆ ಕೆನರಾ ಬ್ಯಾಂಕ್ ನಲ್ಲಿದ್ದ ದೇವಸ್ಥಾನದ ಖಾತೆಯ ಬದಲಾಗಿ ಎಸ್'ಬಿಐಗೆ ಹಣ ವರ್ಗಾಯಿಸಲಾಗಿದೆ.
ಒಟ್ಟಿನಲ್ಲಿ ಹುಂಡಿ ಹಣದ ಮರು ಎಣಿಕೆ ಪ್ರಕರಣದಲ್ಲಿ ಮೋಸ ಬಯಲಾಗಿದ್ದು ಇದು ಇನ್ನು ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.