ಸರಸ್ವತಿ ಪುತ್ರರು ಲಕ್ಷ್ಮೀಯನ್ನು ಬೇಡಿದ್ಯಾಕೆ..!?
ತೀರ್ಥಹಳ್ಳಿ : ವಿದ್ಯಾರ್ಥಿಗಳ ಜೀವನವನ್ನು ರಚಿಸುವ ಶಿಕ್ಷಕರು ಬದಲಾಗುತ್ತಿದ್ದಾರಾ? ಅಥವಾ ಶಿಕ್ಷಕರನ್ನೇ ಬದಲಾಯಿಸುತ್ತಿರುವ ಮೇಲ್ವರ್ಗದ ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ಇದ್ದಾರಾ? ಎಂಬ ಅನುಮಾನಕ್ಕೆ ಪುಷ್ಟಿ ನೀಡುವಂತೆ ಮಾಹಿತಿಯೊಂದು ಲಭ್ಯವಾಗಿದೆ.
ಹೌದು ತೀರ್ಥಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆಯ ದಿನ ಮಹತ್ವ ಪಡೆಯುವ ಹೇಳಿಕೆಯೊಂದು ಹೊರ ಬಿದ್ದಿದ್ದು ಆ ಮಾತು ಕೇಳಿದರೆ ಸರಸ್ವತಿ ಪುತ್ರರು ಲಕ್ಷ್ಮೀ ಯನ್ನು ಬೇಡಿದರೇ? ಅಥವಾ ಯಾರಿಗಾಗಿ ಜಣ ಜಣ ಕಾಂಚಾಣದ ಮಾತು ಬಂತು ? ಸರ್ಕಾರಿ ಶಾಲೆಯ ಶಿಕ್ಷಕರ ಬಳಿ ಹಣ ವಸೂಲಿ ಮಾಡಿದ್ಯಾರು? ಶಿಕ್ಷಕರ ದಿನಾಚರಣೆಗೆ ಹಣದ ಅವಶ್ಯಕತೆ ಯಾಕೆ? ಇಲ್ಲಿಯವರೆಗೆ ಇಲ್ಲದ ಈ ಮಾತು ಈ ಬಾರಿ ಕೇಳಿ ಬಂದಿದ್ಯಾಕೆ? ಮಕ್ಕಳಿಗೆ ಒಳ್ಳೆಯ ಬುದ್ದಿ ಹೇಳುವ ಶಿಕ್ಷಕರು ಈ ವಿಷಯದಲ್ಲಿ ಎಡವಿದ್ಯಾಕೆ !? ಶಿಕ್ಷಕರಿಂದ ಹಣ ಪಡೆದಿದ್ದಕ್ಕೆ ಸಂಬಂಧಪಟ್ಟ ರಶೀದಿ ನೀಡಿದ್ದಾರಾ? ಎಂಬೆಲ್ಲಾ ಪ್ರೆಶ್ನೆಗಳು ಹುಟ್ಟುತ್ತಿವೆ.
ಪ್ರತಿ ವರ್ಷ ಶಿಕ್ಷಕರೆಲ್ಲರೂ ಸೇರಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿ ವರ್ಷ ಇದಕ್ಕಾಗಿ ಪಟ್ಟಣದ ಅನೇಕ ದಾನಿಗಳನ್ನು ಹುಡುಕಿ ಆಚರಿಸುತ್ತಿದ್ದರು. ಆದರೆ ಈ ಬಾರಿ ದಾನಿಗಳು ಇದ್ದರೂ ಕೂಡ ಪ್ರತಿ ಶಿಕ್ಷಕರು ಅಥವಾ ಶಾಲೆಯ ವತಿಯಿಂದ ಐದು ಸಾವಿರ ಹಣ ನೀಡುವಂತೆ ಮೇಲ್ವರ್ಗದ ಅಧಿಕಾರಿಯೊಬ್ಬರು ಇತ್ತೀಚಿಗೆ ನಡೆದ ಸಭೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಿಕ್ಷಕರೇ ಹಣ ಕೊಟ್ಟು ಸನ್ಮಾನ ಪಡೆಯಬೇಕಾ!?
ತಾಲೂಕಿನಲ್ಲಿ ಒಟ್ಟು 800 ಕ್ಕೂ ಹೆಚ್ಚು ಶಿಕ್ಷಕರು ಇದ್ದು ಪ್ರತಿಯೊಬ್ಬರ ಬಳಿ ಹಣ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಾರಣ ಏನು ಎಂದರೆ ಅತ್ಯುತ್ತಮ ಶಿಕ್ಷಕರಿಗೆ, ಶಾಲೆಯಲ್ಲಿ 100% ಬರುತ್ತಿರುವ ಶಾಲೆಗಳಿಗೆ ಪ್ರಶಸ್ತಿ ಕೊಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಅವರಿಗೆ ಸನ್ಮಾನ, ಪ್ರಶಸ್ತಿ ಕೊಡಲು ಕಾರ್ಯಕ್ರಮದ ಹೆಸರು ಅವಶ್ಯಕತೆ ಇದೆಯೇ? ಶಿಕ್ಷಕರ ಹಣವನ್ನು ಶಿಕ್ಷಕರಿಗೆ ವಾಪಾಸ್ ಕೊಡುವ ಪ್ಲಾನ್ ಯಾರದ್ದು? ಶಾಲೆಯಲ್ಲಿ ವಿದ್ಯಾರ್ಥಿಗಳು 100% ಅಂಕ ಪಡೆಯುವಂತೆ ಕಷ್ಟ ಪಟ್ಟ ಶಿಕ್ಷಕರಿಗೆ ಹೀಗೆ ಮಾಡುವ ಬದಲು ಪೋಷಕರೇ ಸನ್ಮಾನ ಮಾಡಲ್ವಾ? ಎಂಬೆಲ್ಲಾ ಚರ್ಚೆಗಳು ಇಂದು ಪಟ್ಟಣದ ಸಾರ್ವಜನಿಕರಿಂದ ಮತ್ತುಹೆಸರು ಹೇಳಲು ಇಚ್ಚಿಸದ ಕೆಲವು ಶಿಕ್ಷಕರಿಂದಲೇ ಕೇಳಿಬಂದಿವೆ.
ಈ ಎಲ್ಲಾ ವಿಷಯಗಳು ಸಾರ್ವಜನಿಕರಿಗೆ ತಿಳಿಯುತ್ತದೆ ಎಂಬ ಕಾರಣಕ್ಕೆ ಕಾರ್ಯಕ್ರಮಕ್ಕೆ ಪತ್ರಕರ್ತರನ್ನು ಕಡೆಗಣನೆ ಮಾಡಲಾಯ್ತಾ? ಎಂಬ ಪ್ರೆಶ್ನೆ ಕೂಡ ಮೂಡಿಸಿದೆ.
Tags:
ತೀರ್ಥಹಳ್ಳಿ ಸುದ್ದಿ