ನರೇಂದ್ರ ಮೋದಿಯವರಿಂದ ಸುಧೀರ್ಘ ಪ್ರಧಾನಿಯಾಗಿ ಆಡಳಿತ - ತೀರ್ಥಹಳ್ಳಿ ಬಿಜೆಪಿ ವತಿಯಿಂದ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ
ತೀರ್ಥಹಳ್ಳಿ : ದೇಶದ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿಯವರು ಸುದೀರ್ಘ ಚುನಾಯಿತ ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ‌್ದಾರೆ. ಈ ಹಿಂದೆ ದೇಶವನ್ನಾಳಿದ್ದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ರವರ 4398 ದಿನಗಳ ಮೈಲಿಗಲ್ಲನ್ನ ಮೋದಿಜಿಯವರು ಇಂದು ಮುರಿದಿದ್ದಾರೆ. ಈ ಕಾರಣದಿಂದ ತೀರ್ಥಹಳ್ಳಿ ಬಿಜೆಪಿ ವತಿಯಿಂದ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು..
ಈ ವೇಳೆ ಮಂಡಲ ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು ಮಾತನಾಡಿ ಸುಮಾರು 13 ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿ ಹಾಗೂ ಕಳೆದ 12 ವರ್ಷಗಳಿಂದ ರಾಷ್ಟ್ರದ ಪ್ರಧಾನಿಯಾಗಿ, ಸುದೀರ್ಘ 25 ವರ್ಷಗಳಿಂದ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮೋದಿಜಿಯ ಜೀವನಪಥವೇ ಎಲ್ಲರಿಗೂ ಸ್ಫೂರ್ತಿದಾಯಕ. ಅಷ್ಟು ವರ್ಷಗಳ ನಿರಂತರ ಸಾರ್ವಜನಿಕ ಜೀವನದ ನಡುವೆ ಎಂದಿಗೂ ಯಾವುದೇ ಕಳಂಕಗಳನ್ನ ಮೈಗಂಟಿಸಿಕೊಳ್ಳದೆ, ರಾಷ್ಟ್ರದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುತ್ತಾ, ನವಭಾರತದ ನಿರ್ಮಾಣದ ನೇತೃತ್ವ ವಹಿಸಿಕೊಂಡಿದ್ದಾರೆ ಎಂದರು..
ದೇಶಕ್ಕೊಬ್ಬ ಸಮರ್ಥ ನಾಯಕನಿದ್ದರೆ ಏನೆಲ್ಲಾ ಸಾಧಿಸಬಹುದು ಎನ್ನುವುದನ್ನ ಮೋದಿಜಿಯವರು ಸಾಧಿಸಿ ತೋರಿಸಿದ್ದಾರೆ. ಮೋದಿಯವರಿಗೆ ಈಗಾಗಲೇ ಮೂವತ್ತಕ್ಕೂ ಅಧಿಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮೋದಿಜಿಯವರಿಗೆ ಇನ್ನಷ್ಟು ವರ್ಷಗಳ ಕಾಲ ರಾಷ್ಟ್ರವನ್ನ ಮುನ್ನಡೆಸಲು ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿ ಪೂಜೆ ನಡೆಸಿದ್ದೇವೆ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಸಂತೋಷ್ ದೇವಾಡಿಗ, ಸಂದೇಶ್ ಜವಳಿ, ರಕ್ಷಿತ್ ಮೇಗರವಳ್ಳಿ, ವಿನುತ್, ಜ್ಯೋತಿ ಮೋಹನ್, ಶಮಂತ್ ಸೇರಿ ಹಲವರು ಉಪಸ್ಥಿತರಿದ್ದರು..
Tags:
ತೀರ್ಥಹಳ್ಳಿ ಸುದ್ದಿ