ತೀರ್ಥಹಳ್ಳಿಯಲ್ಲಿ ಬೀದಿ ನಾಯಿಗಳ ಸೆರೆ ಕಾರ್ಯಾಚರಣೆ, ಪಟ್ಟಣ ಪಂಚಾಯಿತಿ ವಿರುದ್ಧ ಪೊಲೀಸ್ ಠಾಣೆಗೆ ದೂರು..!
ತೀರ್ಥಹಳ್ಳಿ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಕೈಗೊಂಡಿರುವ ಕ್ರಮ ವಿರೋಧಿಸಿ ಬೆಂಗಳೂರಿನ ಪೀಪಲ್ ಫಾರ್ ಅನಿಮಲ್ ಸಂಸ್ಥೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮೂಲಕ ಬೀದಿ ನಾಯಿಗಳನ್ನು ನಿಯಂತ್ರಿಸಲು ಪ.ಪಂ ನಿರ್ಣಯ ಕೈಗೊಂಡಿದೆ. ಆದರೆ ಕಬ್ಬಿಣದ ತಂತಿ ಬಳಸಿ ಅಮಾನವೀಯವಾಗಿ ನಾಯಿಗಳನ್ನು ಹಿಡಿದು, ಕಸ ವಿಲೇವಾರಿ ಘಟಕದಲ್ಲಿ ಕೂಡಿಹಾಕಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಇದನ್ನು ಗಮನಿಸಿ ತೀರ್ಥಹಳ್ಳಿಗೆ ಧಾವಿಸಿದ ಸಂಸ್ಥೆಯ ಹರೀಶ್ ಅವರು, ‘ಹಿಡಿದಿಟ್ಟಿರುವ ನಾಯಿಗಳಿಗೆ ಆಹಾರ ನೀಡುತ್ತಿಲ್ಲ. ಈ ಕಾರ್ಯಾಚರಣೆಯಲ್ಲಿ ಕೆಲವು ನಾಯಿಗಳು ಮೃತಪಟ್ಟಿರುವ ಸಾಧ್ಯತೆಯೂ ಇದೆ’ ಎಂದು ಆರೋಪಿಸಿ ಪಪಂ ಕ್ರಮದ ವಿರುದ್ಧ ದೂರು ನೀಡಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ