ಶಿವಮೊಗ್ಗಕ್ಕೆ ವಿಮಾನಯಾನ ಸೇವೆ ಒದಗಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಸೇವೆ ಸ್ಥಗಿತ..!
ಶಿವಮೊಗ್ಗ: ಇಂಡಿಗೋ ಏರ್‌ಲೈನ್ಸ್ ವಿಮಾನಯಾನ ಸೇವೆ ಸ್ಥಗಿತಗೊಂಡ ಬೆನ್ನಲ್ಲೇ, ಶಿವಮೊಗ್ಗಕ್ಕೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನಯಾನ ಸೇವೆಯೂ ರದ್ದಾಗಿದೆ. ಇದರೊಂದಿಗೆ ಸಂಸ್ಥೆಯು ತನ್ನ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಕೂಡ ಸ್ಥಗಿತಗೊಳಿಸಿದೆ..ಸ್ಪೈಸ್ ಜೆಟ್ ಸಂಸ್ಥೆಯು ಚೆನ್ನೈ ಮತ್ತು ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ವಿಮಾನಯಾನ ಸೇವೆ ಒದಗಿಸುತ್ತಿತ್ತು. ಆದರೆ ಕಳೆದ ಐದು ದಿನಗಳಿಂದ ಈ ಮಾರ್ಗಗಳ ವಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದೆ.
ಚೆನ್ನೈ – ಶಿವಮೊಗ್ಗ – ಚೆನ್ನೈ ಮತ್ತು ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಈ ವಿಮಾನಗಳು ಜೂನ್ ಆರಂಭದಿಂದಲೇ ಸ್ಥಗಿತಗೊಂಡಿವೆ. ಜೂನ್ 1ರಿಂದ ಚೆನ್ನೈ ಮಾರ್ಗದ ವಿಮಾನ ಹಾಗೂ ಜೂನ್ 2ರಿಂದ ಹೈದರಾಬಾದ್ ಮಾರ್ಗದ ವಿಮಾನಯಾನ ಸೇವೆ ನಿಂತಿದ್ದು, ಪ್ರಯಾಣಿಕರಲ್ಲಿ ಭಾರಿ ಗೊಂದಲ ಮೂಡಿಸಿದೆ. ಈಗಾಗಲೇ ವಿಮಾನಯಾನ ಸೇವೆ ರದ್ದಾದ ಬೆನ್ನಲ್ಲೇ ಆನ್‌ಲೈನ್ ಹಾಗೂ ವಿವಿಧ ಏಜೆನ್ಸಿಗಳ ಮೂಲಕ ನಡೆಯುತ್ತಿದ್ದ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಬೆಂಗಳೂರು – ಶಿವಮೊಗ್ಗ ಮಧ್ಯೆ ಸೇವೆ ಒದಗಿಸುತ್ತಿದ್ದ ಇಂಡಿಗೋ ಸಂಸ್ಥೆಯು 2026ರ ಮೇ 1ರಿಂದ ತನ್ನ ಸೇವೆ ಸ್ಥಗಿತಗೊಳಿಸಿತ್ತು. ಈಗ ಸ್ಪೈಸ್ ಜೆಟ್ ಕೂಡ ರದ್ದಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.. ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆ ಮಾತ್ರ ಸೇವೆ ಒದಗಿಸುತ್ತಿದೆ. ಈ ಸಂಸ್ಥೆಯು ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ನಿತ್ಯ ಆರು ಟ್ರಿಪ್‌ಗಳ ಹಾರಾಟ ನಡೆಸುತ್ತಿದೆ.
Tags:
ಶಿವಮೊಗ್ಗ ಸುದ್ದಿ