ಆಗುಂಬೆ ಘಾಟಿಯಲ್ಲಿ ಸಾವಿರ ಮೀಟರ್ ಜಾಗಕ್ಕೆ ತಡೆ ಬೇಲಿ ನಿರ್ಮಾಣ - ರೂ 15 ಕೋಟಿ ಮಂಜೂರು
ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ ಭೂಕುಸಿತ ತಡೆಗೆ ಅಲ್ಲಿನ ರಸ್ತೆ ತಿರುವುಗಳ ದಂಡೆಗಳಲ್ಲಿ ಸಾವಿರ ಮೀಟರ್‌ನಷ್ಟು ಜಾಗಕ್ಕೆ ತಡೆಬೇಲಿ ನಿರ್ಮಿಸಲು ಸೂಚಿಸಲಾಗಿದೆ. ಘಾಟಿ ರಸ್ತೆ ದುರಸ್ತಿಗೆ 15 ಕೋಟಿ ರೂ. ಮಂಜೂರಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಆಗುಂಬೆ ಘಾಟಿಯಲ್ಲಿ ವಾಹನಗಳ ಒತ್ತಡದಿಂದ ಸಂಚಾರ ಸಮಸ್ಯೆ, ಕೆಲವು ತಿರುವಿನ ದಂಡೆ ಕುಸಿದಿರುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆ ಅರಣ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಆಗುಂಬೆ ಘಾಟಿಗೆ ಭೇಟಿ ನೀಡಿ ರಸ್ತೆ ತಿರುವುಗಳನ್ನು ವೀಕ್ಷಿಸಿ ಮಾತನಾಡಿದರು.
ಇತ್ತೀಚಿಗೆ ಹುಲಿಕಲ್ ಘಾಟಿಯಲ್ಲಿ ಆದ ದುರಂತದಿಂದ
ಹುಲಿಕಲ್ ಘಾಟಿಯಲ್ಲಿ ವಾಹನ ನಿರ್ಬಂಧವಿದ್ದು ಆಗುಂಬೆ ಘಾಟಿಯಲ್ಲಿ ಅತಿಯಾದ ವಾಹನ ದಟ್ಟಣೆಯಾಗುತ್ತಿದೆ. ನಿರ್ಬಂಧವಿದ್ದರೂ ಜಲ್ಲಿಕಲ್ಲು ಸಾಗಿಸುವ ಲಾರಿಗಳು ಮತ್ತು ಭಾರಿ ತೂಕದ ವಾಹನಗಳ ಸಂಚಾರದಿಂದ ಇಲ್ಲಿನ ತಿರುವುಗಳಲ್ಲಿ ಭೂಕುಸಿತ ಸಂಭವದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ತುರ್ತಾಗಿ ತಿರುವಿನ ದಂಡೆಗಳಲ್ಲಿ ತಡೆಬೇಲಿ ನಿರ್ಮಿಸಲಾಗುವುದು. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಇನ್ನು ಆಗುಂಬೆ ಘಾಟಿಯಲ್ಲಿ ಭೂಕುಸಿತ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾವನೆಯಂತೆ ಸುರಂಗ ಮಾರ್ಗ ಮತ್ತು ಈಗಿರುವ ರಸ್ತೆಗಳ ದ್ವಿಪಥದ ಬಗ್ಗೆ ಡಿಪಿಆರ್ ಗಾಗಿ ಟೆಂಡರ್ ಕರೆಯಲಾಗಿದೆ. ಸಾಧ್ಯತಾ ವರದಿ ಅವಲಂಬಿಸಿ ಎರಡು ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿಭಾಗೀಯ ಅಧಿಕಾರಿ ಶ್ರೀಧರ್ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ದೂರವಾಣಿ ಮೂಲಕ ಸಲಹೆ ನೀಡಿದರು.
ಆಗುಂಬೆ ವನ್ಯಜೀವಿ ವಲಯದ ಅಮಾಸೆಬೈಲು ವಲಯ ಅರಣ್ಯಾಧಿಕಾರಿ ರೂಪೇಶ್ ಚವ್ಹಾಣ, ಸೋಮೇಶ್ವರ ವನ್ಯಜೀವಿ ವಲಯದ ಹೆಬ್ರಿ ಅರಣ್ಯಾಧಿಕಾರಿ ಚಿದಾನಂದಪ್ಪ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯಪಾಲಕ ಅಭಿಯಂತ ನವೀನ್ ಮತ್ತು ಸಹಾಯಕ ಶಶಿಧರ್ ಜೋಯಿಸ್ ಉಪಸ್ಥಿತರಿದ್ದರು
Tags:
ಆಗುಂಬೆ ಸುದ್ದಿ