ತೀರ್ಥಹಳ್ಳಿಯಲ್ಲಿ ರಸ್ತೆ ಜಾಗದ ಗಲಾಟೆ : ದಂಪತಿ ಮೇಲೆ ಭೀಕರ ಹಲ್ಲೆ, 6 ಮಂದಿ ವಿರುದ್ಧ ಎಫ್‌ಐಆರ್ ದಾಖಲು​ Crime

ತೀರ್ಥಹಳ್ಳಿಯಲ್ಲಿ ರಸ್ತೆ ಜಾಗದ ಗಲಾಟೆ : ದಂಪತಿ ಮೇಲೆ ಭೀಕರ ಹಲ್ಲೆ, 6 ಮಂದಿ ವಿರುದ್ಧ ಎಫ್‌ಐಆರ್ ದಾಖಲು

​ತೀರ್ಥಹಳ್ಳಿ: ಗ್ರಾಮ ಪಂಚಾಯಿತಿ ರಸ್ತೆಗೆ ಬೇಲಿ ಹಾಕುವ ವಿಚಾರವಾಗಿ ಶುರುವಾದ ಜಗಳವೊಂದು ದಂಪತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುವ ಹಂತಕ್ಕೆ ತಲುಪಿರುವ  ಘಟನೆ ತಾಲೂಕಿನ ಹಾದಿಗಲ್ಲು ಸಮೀಪದ ಕರಡಿಗ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರು ಆರೋಪಿಗಳ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನಲೆ ಏನು ?

ಕರಡಿಗ ಗ್ರಾಮದ ನಿವಾಸಿ ಅಮೂಲ್ಯ ಅವರು ನೀಡಿರುವ ದೂರಿನ ಅನ್ವಯ, ಮೇ 27ರಂದು ಬೆಳಿಗ್ಗೆ 8.15ರ ಸುಮಾರಿಗೆ ಈ  ಘಟನೆ ಜರುಗಿದೆ. ಗ್ರಾಮ ಪಂಚಾಯಿತಿ ರಸ್ತೆಗೆ ಬೇಲಿ ಹಾಕುವ ವಿಚಾರವನ್ನು ಅಮೂಲ್ಯ ಪ್ರಶ್ನಿಸಿದ್ದಾರೆ. ಇದೇ ವೇಳೆ ಹಳೆಯ ದ್ವೇಷವನ್ನು ಮುಂದಿಟ್ಟುಕೊಂಡು ಆರೋಪಿಗಳು ಏಕಾಏಕಿ ಜಗಳಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಆರೋಪಿಗಳಾದ ಮಂಜುನಾಥ, ಚಂದ್ರಶೇಖರ, ಜಯಮ್ಮ, ಲೋಲಮ್ಮ, ಸೀಮಾ ಮತ್ತು ಮತ್ತೋರ್ವ ಚಂದ್ರಶೇಖರ್ ಎಂಬುವವರು ಒಗ್ಗೂಡಿ ಅಮೂಲ್ಯ ಹಾಗೂ ಅವರ ಪತಿ ಶಿವಶಂಕರ ಅವರ ಮೇಲೆ ಮುಗಿಬಿದ್ದಿದ್ದಾರೆ. ದಂಪತಿಯನ್ನು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ಥಳಿಸಿದ್ದಾರೆ. ಹಲ್ಲೆಯ ತೀವ್ರತೆಗೆ ಮೈತುಂಬಾ ರಕ್ತ ಹೆಪ್ಪುಗಟ್ಟುವಂತಹ ಬಾಸುಂಡೆಗಳು ಬಿದ್ದಿವೆ.. ನಂತರ ಶಿವಶಂಕರ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರಾಣ ತೆಗೆಯುವುದಾಗಿ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡು ನರಳುತ್ತಿದ್ದ ದಂಪತಿಯನ್ನು ಕಂಡ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳು ದಂಪತಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ವಿವಿಧ ಗಂಭೀರ ಕಲಂಗಳಾದ U/s-189(2), 189(4), 191(2), 191(3), 126(2), 352, 74, 115(2), 118(1), 351(2), ಹಾಗೂ 190ರ ಅಡಿ ಒಟ್ಟು ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Previous Post Next Post