ಶಿವಮೊಗ್ಗ - ಶೃಂಗೇರಿ - ಮಂಗಳೂರು ನೂತನ ರೈಲು ಮಾರ್ಗದ ಬಗ್ಗೆ ಬಿ ವೈ ರಾಘವೇಂದ್ರ ಹೇಳಿದ್ದೇನು?
ತೀರ್ಥಹಳ್ಳಿಗೆ ಬರಲಿದೆ ರೈಲು - ಬಹುವರ್ಷದ ಕನಸು ಈಗ ನನಸು
ಶಿವಮೊಗ್ಗ : ಶಿವಮೊಗ್ಗ ಕ್ಷೇತ್ರದ ಜನರ ಎಷ್ಟೋ ವರ್ಷಗಳ ಕನಸಾಗಿದ್ದ ಶಿವಮೊಗ್ಗ - ಶೃಂಗೇರಿ - ಮಂಗಳೂರು ನೂತನ ರೈಲು ಮಾರ್ಗ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಈಗ ಮತ್ತಷ್ಟು ವೇಗ ದೊರೆತಿದೆ. ಈ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಅಂತಿಮ ಸ್ಥಳ ಸಮೀಕ್ಷೆ (FLS) ಮತ್ತು ವಿಸ್ತೃತ ಯೋಜನಾ ವರದಿ (DPR) ತಯಾರಿಕೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲು ಇಲಾಖೆಯು ಸಂಪೂರ್ಣ ಸಿದ್ಧತೆ ನಡೆಸಿದೆ.
ಈ ಬಗ್ಗೆ ಮಲೆನಾಡು ಹಾಗೂ ಕರಾವಳಿ ಭಾಗದ ಜನತೆಗೆ ಒಂದು ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ವಿಷಯವನ್ನು ಸಂಸದ ರಾಘವೇಂದ್ರ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಯೋಜನೆಯ ಒಟ್ಟು ಉದ್ದ: 332 ಕಿ.ಮೀ ಆಗಿದ್ದು, ಅಂದಾಜು ವೆಚ್ಚ: ₹3,300 ಕೋಟಿ ತಗುಲುತ್ತದೆ . ಇದರ ಲಾಭವನ್ನು
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಪಡೆದುಕೊಳ್ಳಲಿವೆ. ಹಾಗೆಯೇ ತೀರ್ಥಹಳ್ಳಿ,ಹೊಸನಗರ, ಶೃಂಗೇರಿ ಹಾಗೂ ಕಾರ್ಕಳ ನಗರದ ಮೂಲಕ ಈ ನೂತನ ರೈಲು ಮಾರ್ಗ ಹಾದು ಹೋಗಲಿದೆ. ಈ ರೈಲ್ವೆ ಮಾರ್ಗವು ಮಲೆನಾಡು ಮತ್ತು ಕರಾವಳಿಯ ನಡುವೆ ವಾಣಿಜ್ಯ ವ್ಯವಹಾರ, ಕೃಷಿ ಉತ್ಪನ್ನಗಳ ಸುಲಭ ಸಾಗಣೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ.
ಮಲೆನಾಡಿನ ಭಾಗದ ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲು ಮತ್ತು ಈ ಬೃಹತ್ ಯೋಜನೆಗೆ ಅನುಮೋದನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ನನ್ನ ಹಾಗೂ ನಮ್ಮ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನ ಸಂಸದರು ತಿಳಿಸಿದ್ದಾರೆ.