ಮಾನವ ಸಂಪನ್ಮೂಲ ವಿಭಾಗದ ಉಪಕುಲಸಚಿವ ಹುದ್ದೆಗೆ ಚಂದ್ರಕಾಂತ್ ನೇಮಕ: ಸಂಶಯಕ್ಕೆಡೆ ಮಾಡಿದ ಕುವೆಂಪು ವಿವಿ ನಡೆ - ವರಲಕ್ಷ್ಮಿ ಪ್ರಕಾಶ್ shivamogga

ಮಾನವ ಸಂಪನ್ಮೂಲ ವಿಭಾಗದ ಉಪಕುಲಸಚಿವ ಹುದ್ದೆಗೆ ಚಂದ್ರಕಾಂತ್ ನೇಮಕ: ಸಂಶಯಕ್ಕೆಡೆ ಮಾಡಿದ ಕುವೆಂಪು ವಿವಿ ನಡೆ - ವರಲಕ್ಷ್ಮಿ ಪ್ರಕಾಶ್

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ವಿವಿಧ ಸಮಸ್ಯೆ ಹಾಗೂ ಆರೋಪಗಳನ್ನು ಎದುರಿಸುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಪ್ರಭಾರ ಕುಲಸಚಿವರು ಏಪ್ರಿಲ್ ಒಂದರಂದು ತರಾತುರಿಯಲ್ಲೇನೋ ಎಂಬಂತೆ ಹೊರಡಿಸಿರುವ ಜ್ಞಾಪನಾ ಪತ್ರವು ಭಾರೀ ಚರ್ಚೆಗೆ ಗ್ರಾಸವಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ. ವರಲಕ್ಷ್ಮಿ ಪ್ರಕಾಶ್ ಆರೋಪಿಸಿದರು.

ದಶಕಗಳ ಹಿಂದೆ ಹುದ್ದೆ ಖಾಯಂ ರದ್ದುಗೊಳಿಸಲು ಆದೇಶವಾಗಿದ್ದರೂ ಸಹ ಕರ್ತವ್ಯದಲ್ಲಿ ಮುಂದುವರಿಯುತ್ತಿರುವ ಎಂ. ಚಂದ್ರಕಾಂತ್ ಅವರನ್ನು ಕುಲಪತಿಗಳ ಆದೇಶದ ಮೇರೆಗೆ ಪ್ರಭಾರ ಕುಲಸಚಿವರು ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ (ಹೆಚ್‌ಆರ್‌ಎಂ) ಉಪಕುಲಸಚಿವ ಹುದ್ದೆಗೆ ಆಂತರಿಕ ಬದಲಾವಣೆ ಮಾಡಿ ಏಪ್ರಿಲ್ ಒಂದರಂದು ಜ್ಞಾಪನಾ ಪತ್ರ ಹೊರಡಿಸಿದ್ದಾರೆ ಎಂದರು.

ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿಯಾಗಿರುವ ಜಿಪಂ ಸಿಇಓ ಎನ್. ಹೇಮಂತ್ ಕುಮಾರ್ ಅವರನ್ನು ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಹುದ್ದೆಗೆ ನಿಯೋಜಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾರ್ಚ್ 31ರಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಹೇಮಂತ್ ಅವರ ಕೈ ತಲುಪಿ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ತರಾತುರಿಯಲ್ಲಿ ಪ್ರಭಾರ ಕುಲಸಚಿವ (ಆಡಳಿತ) ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಲಸಚಿವ (ಪರೀಕ್ಷಾಂಗ) ತಿಮ್ಮರಾಯಪ್ಪ ಇವರು ಸರ್ಕಾರದ ಮಾರ್ಚ್ 31ರ ಆದೇಶದ ನಂತರ ಏಪ್ರಿಲ್ 1ರಂದು ಹೆಚ್‌ಎಂಆರ್‌ನ ಉಪಕುಲಸಚಿವ ಹುದ್ದೆಗೆ ಎಂ. ಚಂದ್ರಕಾಂತ್ ಅವರನ್ನು ನೇಮಿಸಿ ಜ್ಞಾಪನಾಪತ್ರ ಹೊರಡಿಸಿದ್ದಾರೆಂದು ಹೇಳಿದರು.

ಶಿಕ್ಷಣ ಇಲಾಖೆ (ಉ.ಶಿ. ಮತ್ತು ವಿಶ್ವವಿದ್ಯಾಲಯಗಳು) ಕುವೆಂಪು ವಿವಿಯಲ್ಲಿ ಶೀಘ್ರ ಲಿಪಿಕಾರರಾಗಿದ್ದ ಎಂ. ಚಂದ್ರಕಾಂತ್ ಸೇರಿದಂತೆ 12 ಮಂದಿ ಹಂಗಾಮಿ/ ದಿನಗೂಲಿ ಅಧ್ಯಾಪಕೇತರ ನೌಕರರನ್ನು ಸರ್ಕಾರದಿಂದ ಅನುಮತಿಯನ್ನಾಗಿ ಅಥವಾ ಈ ವಿಲೀನಿಕರಣ ಪ್ರಕ್ರಿಯೆಗೆ ಸೂಕ್ತ ಪರಿಣಾಮಗಳನ್ನು ರಚಿಸಿಕೊಂಡು ಕುಲಾಧಿಪತಿಗಳ ಅನುಮೋದನೆ ಪಡೆಯದೆ ಖಾಯಂಗೊಳಿಸಿ ಆದೇಶ ಹೊರಡಿಸಿರುವ ಕ್ರಮವು ಕಾನೂನು ಬಾಹಿರವಾಗಿದ್ದು, ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 10(1) ಏಕೆ ರದ್ದುಗೊಳಿಸಬಾರದೆಂದು ಕುಲಸಚಿವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

ಕುಲಸಚಿವರು ಸರ್ಕಾರಕ್ಕೆ ಸಲ್ಲಿಸಿದ ಉತ್ತರ ಮತ್ತು ವಿವರಣೆ ಆಧರಿಸಿ ಹಂಗಾಮಿ/ ದಿನಗೂಲಿ ಅಧ್ಯಾಪಕೇತರ ನೌಕರರ ಖಾಯಂಮಾತಿಯನ್ನು ರದ್ದುಗೊಳಿಸಿ ಮತ್ತು ಈಗಾಗಲೇ ಹಂಗಾಮಿ ನೌಕರರಿಗೆ ವಿಸ್ತರಿಸಿರುವ ಸೌಲಭ್ಯವನ್ನು ಮತ್ತು ವೇತನ ಬಾಕಿಗಳ ವ್ಯತ್ಯಾಸವನ್ನು ಪ್ರತಿಯೊಬ್ಬ ನೌಕರರಿಂದ ವಸೂಲಿ ಮಾಡುವಂತೆ ಹಾಗೂ ಇದಕ್ಕೆ ಕಾರಣಕರ್ತರಾದ ಅಧಿಕಾರಿ/ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ಕೈಗೊಳ್ಳುತ್ತದೆ ಸೂಚಿಸಲಾಗಿತ್ತು.

ಆದರೂ ಸಹ ಕರ್ತವ್ಯದಲ್ಲಿ ಮುಂದುವರೆದಿದ್ದ ಚಂದ್ರಕಾಂತ್ ವಿವಿಯ ದಾಸ್ತಾನು ಮತ್ತು ಖರೀದಿ ವಿಭಾಗದಲ್ಲಿ ಉಪಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರನ್ನು ಏಪ್ರಿಲ್ ಒಂದರ ಮಧ್ಯಾಹ್ನದಿಂದ ಅನ್ವಯವಾಗುವಂತೆ ಹೆಚ್‌ಆರ್‌ಎಂ ವಿಭಾಗಕ್ಕೆ ಆಂತರಿಕ ಬದಲಾವಣೆ ಮಾಡಲಾಗಿದೆ. ಅಲ್ಲದೆ ಸದರಿ ಕರ್ತವ್ಯದ ಜೊತೆಗೆ ದಾಸ್ತಾನು ಮತ್ತು ಖರೀದಿ ವಿಭಾಗದ ಕಾರ್ಯವನ್ನು ಹೆಚ್ಚುವರಿಯಾಗಿ ನಿರ್ವಹಿಸಲು ಆದೇಶಿಸಲಾಗಿದೆ ಎಂದು ವಿವರಿಸಿದರು.

ಪ್ರಭಾರ ರಿಜಿಸ್ಟಾರ್ ಹೇಮಂತ್ ಕುಮಾರ್ ಅವರು ಏಪ್ರಿಲ್ 6ರ ಸೋಮವಾರ ಹುದ್ದೆ ವಹಿಸಿಕೊಳ್ಳಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಅಷ್ಟರೊಳಗೆ ಹೆಚ್‌ಆರ್‌ಎಂ ವಿಭಾಗದಲ್ಲಿ ತಳವೂರಿದಲ್ಲಿ ಸಧ್ಯಕ್ಕೆ ಈ ಹುದ್ದೆಯಿಂದ ಬಿಡುಗಡೆಗೊಳಿಸುವುದು ಸುಲಭವಲ್ಲ ಎಂದು ಆಡಳಿತ ವರ್ಗದ ಕೆಲ ಪ್ರಮುಖರು ತೀರ್ಮಾನಿಸಿದಂತಿದೆ. 

ಹೆಚ್‌ಆರ್‌ಎಂ ಡೆಪ್ಯೂಟಿ ರಿಜಿಸ್ಟಾರ್ (ಡಿಆರ್) ಆಗಿ ಈಗಾಗಲೇ ಅಧಿಕಾರ ಸ್ವೀಕರಿಸಿರುವ ಚಂದ್ರಕಾಂತ್, ವಿವಿಯ ಆಂತರಿಕ ವರ್ಗಾವಣೆಯಲ್ಲಿ ಹೆಚ್ಚು ಮುತುವರ್ಜಿವಹಿಸಿದ್ದಾರೆ. ಸುಮಾರು 30ರಿಂದ 35 ಸಿಬ್ಬಂದಿಯನ್ನು ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಲು ಹೆಚ್‌ಆರ್‌ಎಂ ವಿಭಾಗ ಸನ್ನದ್ಧವಾಗಿರುವ ಸಾಧ್ಯತೆ ಕಂಡುಬರುತ್ತಿದೆ.

ಈಗಾಗಲೇ ಇಲಾಖಾ ತನಿಖೆಯನ್ನು ಎದುರಿಸುತ್ತಿರುವ ಚಂದ್ರಕಾಂತ್ ಹೆಚ್‌ಆರ್‌ಎಂನ ಡಿಆರ್‌ನಂತಹ ಆಯಕಟ್ಟಿನ ಜಾಗಕ್ಕೆ ಬಂದು ಬಿಟ್ಟಿದ್ದಾರೆ. ದಿಟ್ಟ ಅಧಿಕಾರಿ ಎಂದೇ ಹೆಸರಾಗಿರುವ ಜಿಪಂ ಸಿಇಓ ಹೇಮಂತ್ ಕುಮಾರ್ ಅವರು ಪ್ರಭಾರ ರಿಜಿಸ್ಟಾರ್ ಆಗಿ ಅಧಿಕಾರ ವಹಿಸಿಕೊಂಡ ಕೂಡಲೇ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಒತ್ತಾಯಿಸುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ವಕೀಲರಾದ ರೂಪ ಸತೀಶ್, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯದರ್ಶಿ ಭಾಗ್ಯ, ಜಿಲ್ಲಾ ಸಂಚಾಲಕ ಮಹಮದ್ ಅಯೂಬ್ ಉಪಸ್ಥಿತರಿದ್ದರು.




Previous Post Next Post