ಶಾಸಕರ ಸಂಬಂಧಿಕರಾಗಲಿ ಯಾರೇ ಆಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ - ಸತೀಶ್ ಜಾರಕಿಹೊಳಿ
ತೀರ್ಥಹಳ್ಳಿ : ಹುಲಿಕಲ್ ಘಾಟಿ ಕುಸಿತದಿಂದ 3 ಸಾವು ಆಗಿದೆ. ಪ್ರಕರಣ ವಿಚಾರವಾಗಿ ನಾನು ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡುತ್ತೇನೆ..ಯಾವ ಕಾರಣಕ್ಕೆ ಆಗಿದೆ ಹಾಗೂ ಮುಂದೆ ಶಾಶ್ವತವಾಗಿ ಆಗಬಾರದು ಎಂಬ ಚರ್ಚೆ ಮಾಡಲು ಭೇಟಿ ನೀಡಲಿದ್ದೇನೆ. ಸಮಸ್ಯೆ ಹೇಗೆ ಪರಿಹಾರ ಮಾಡಬೇಕು ಎಂಬ ಚರ್ಚೆ ಮಾಡಲಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡುವ ಕೆಲಸ ಈಗಾಗಲೇ ಆಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ತೀರ್ಥಹಳ್ಳಿಯ ವಿಹಂಗಮ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಇಲಾಖೆಯಿಂದ ಗೈಡ್ಲೈನ್ಸ್ ಕೊಡಲಾಗಿದೆ ಅದನ್ನ ಗುತ್ತಿಗೆದಾರರು ಫಾಲೋ ಮಾಡಬೇಕಿತ್ತು. ಎರಡು ಕಡೆಯಿಂದನೂ ತಪ್ಪಾಗಿದೆ
ನಮ್ಮ ಅಧಿಕಾರಿಗಳಿಂದಲೂ ಆಗಿರಬಹುದು ಹಾಗೆ ಅವರು ಕೂಡ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. ರಿಪೋರ್ಟ್ ಏನು ಬರುತ್ತದೆ ಎಂಬುದು ಹಾಗೂ ನಾನು ಅಲ್ಲಿಗೆ ಹೋದ ಮೇಲೆ ಹೇಗೆ ಅನಿಸುತ್ತದೆ ಎಂಬುದನ್ನು ನೋಡಿ ತೀರ್ಮಾನಕ್ಕೆ ಬರುತ್ತೇವೆ ಎಂದರು.
ಎರಡು ವರ್ಷಗಳ ಹಿಂದೆ ಕಾರವಾರದಲ್ಲೂ ಕೂಡ ಈ ರೀತಿಯ ಘಟನೆ ಆಗಿತ್ತು. ಅದೇ ಮಾದರಿಯಲ್ಲಿ ಈ ಘಟನೆ ಕೂಡ ಆಗಿದೆ. ಮುಂದಿನ ದಿನಗಳಲ್ಲಿ ಆಗುಂಬೆಯನ್ನು ಕೂಡ ನೋಡಿಕೊಂಡು ಕೆಲಸ ಮಾಡುತ್ತೇವೆ. ಅಲ್ಲೂ ಕೂಡ ಯಾವುದೇ ರೀತಿಯ ಭೂಕುಸಿತಗಳು ಆಗದಂತೆ ಕಾರ್ಯವನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಶಾಸಕರ ಸಂಬಂಧಿಕರಾಗಲಿ ಯಾರೇ ಆಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಸ್ಥಳದಲ್ಲಿ ಯಾರ ಲೋಪ ಇದೆ ಎಂಬುದನ್ನು ನೋಡಬೇಕಿದೆ. ನಮ್ಮ ಇಲಾಖೆಯಿಂದ ತಪ್ಪಾಗಿದೆಯಾ ಅಥವಾ ಗುತ್ತಿಗೆದಾರರಿಂದ ತಪ್ಪಾಗಿದೆಯೇ ಎಂಬುದನ್ನ ತನಿಖೆ ಮಾಡಬೇಕಿದೆ. ವರದಿ ಬಂದಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗಬಾರದು ಎಂದ ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದರು..