ವಾಣಿಜ್ಯ ಅನಿಲ ಅಭಾವ - ಶಿವಮೊಗ್ಗದಲ್ಲಿ ನಾಳೆಯಿಂದ ಹೋಟೆಲ್ ಬಂದ್?
ಶಿವಮೊಗ್ಗ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ವಾಣಿಜ್ಯ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದೆ. ಅಂತರಾಷ್ಟ್ರೀಯ ಮಟ್ಟದ ಸಂಘರ್ಷದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಅನಿಲದ ಅಭಾವ ಸೃಷ್ಟಿಯಾಗಿದ್ದು ಈಗ ಶಿವಮೊಗ್ಗ ನಗರದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘವು ತುರ್ತು ಸಭೆ ನಡೆಸಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಶಂಕರನಾರಯಣ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಗ್ಯಾಸ್ ಪೂರೈಕೆಯ ವ್ಯತ್ಯಯದ ಬಗ್ಗೆ ಇಂದು ಚರ್ಚೆ ನಡೆಸಲಾಯಿತು. ಸಭೆಯ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಗ್ಯಾಸ್ ಕೊರತೆ ವಿಪರೀತವಾಗಿದೆ. ಗ್ಯಾಸ್ ಏಜೆನ್ಸಿಗಳನ್ನು ವಿಚಾರಿಸಿದರೆ, ಈ ಮೊದಲು ಒಂದು ಲೋಡ್‌ಗೆ ಬರುತ್ತಿದ್ದ 30 ಹೆಚ್ಚುವರಿ ಸಿಲಿಂಡರ್‌ಗಳ ಬದಲಿಗೆ ಈಗ ಕೇವಲ 10 ಸಿಲಿಂಡರ್‌ಗಳು ಮಾತ್ರ ಲಭ್ಯವಾಗುತ್ತಿವೆ ಎಂದಿದ್ದಾರೆ.
ಶಿವಮೊಗ್ಗದ ಶೇ. 90 ರಷ್ಟು ಹೋಟೆಲ್‌ಗಳು ಅಡುಗೆಗಾಗಿ ಸಂಪೂರ್ಣವಾಗಿ ಗ್ಯಾಸ್ ಒಲೆಗಳನ್ನೇ ಅವಲಂಬಿಸಿವೆ. ಅನಿಲ ಲಭ್ಯವಾಗದ ಕಾರಣ ಈಗಾಗಲೇ ಹೋಟೆಲ್‌ಗಳಲ್ಲಿ ಲಭ್ಯವಿರುವ ಮೆನುಗಳನ್ನು ಕಡಿತಗೊಳಿಸಲಾಗಿದೆ. ನಮಗೆ ವ್ಯವಹಾರವಿಲ್ಲದೆ ಕೆಲಸಗಾರರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾಹಕರಿಗೆ ತೊಂದರೆಯಾಗಬಾರದೆಂಬ ಒಂದೇ ಕಾರಣಕ್ಕೆ ಇಷ್ಟು ದಿನ ಹೋಟೆಲ್ ನಡೆಸುತ್ತಿದ್ದೇವೆ. ಆದರೆ ಪರಿಸ್ಥಿತಿ ಮಿತಿ ಮೀರಿದೆ ಎಂದು ಅವರು ಅಳಲು ತೋಡಿಕೊಂಡರು.
ಈ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲುಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಹಾಸ್ಟೆಲ್ ಮತ್ತು ಪಿಜಿಗಳ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಆಸ್ಪತ್ರೆಯಿಂದ ಬರುವ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡುವ ಹೋಟೆಲ್‌ಗಳಿಗೆ ತುರ್ತು ಅನಿಲ ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಒಂದು ವೇಳೆ ಇಂದು ಸಂಜೆಯೊಳಗೆ ಗ್ಯಾಸ್ ಲಭ್ಯವಾಗದಿದ್ದರೆ, ನಾಳೆಯಿಂದ ಜಿಲ್ಲೆಯ ಬಹುತೇಕ ಹೋಟೆಲ್‌ಗಳನ್ನು ಅನಿವಾರ್ಯವಾಗಿ ಬಂದ್ ಮಾಡುವುದಾಗಿ ಮಾಲೀಕರು ತಿಳಿಸಿದ್ದಾರೆ.
Tags:
ಶಿವಮೊಗ್ಗ ಸುದ್ದಿ