ಮದುವೆ ಸಮಾರಂಭಗಳಲ್ಲಿ ಕಳವು ಮಾಡುತ್ತಿದ್ದ ಮಹಿಳೆ ಅರೆಸ್ಟ್!
ಶಿವಮೊಗ್ಗ : ಶಾದಿ ಮಹಲ್ ಗಳಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ, ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಿದ್ದ ಆರೋಪದ ಮೇರೆಗೆ ಮಹಿಳೆಯೋರ್ವಳನ್ನು ಶಿವಮೊಗ್ಗ ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶಿವಮೊಗ್ಗದ ಸೂಳೇಬೈಲು ಬಡಾವಣೆ ನಿವಾಸಿ ರುಕ್ಸಾರ್ ಫಿರ್ದೋಸ್ ಕೋಂ ಮೊಹಮ್ಮದ್ ನಯಾಜ್ (30) ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಆಪಾದಿತಳನ್ನು ಮಾರ್ಚ್ 07 ರಂದು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾರ್ಚ್ 09 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಆಪಾದಿತಳಿಂದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾದಿ ಮಹಲ್ ಗಳಲ್ಲಿ ನಡೆದಿದ್ದ 4 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ, 1.80 ಲಕ್ಷ ರೂ. ಮೌಲ್ಯದ 120 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್, ಸಬ್ ಇನ್ಸ್’ಪೆಕ್ಟರ್ ಗಾದಿಲಿಂಗಪ್ಪ ಗೌಡರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಿರಣ್ ಮೋರೆ, ಅರುಣ್ ಕುಮಾರ್, ಶೋಭಾರಾಣಿ, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ್, ಹರೀಶ್, ರಂಗನಾಥ್, ತಮ್ಮ ಜಂಬಗಿರವರು ಆಪಾದಿತಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
Tags:
ಕ್ರೈಂ ಸುದ್ದಿ