ಮದ್ಯದ ವಿಚಾರವಾಗಿ ನಡು ರಸ್ತೆಯಲ್ಲೇ ಯುವಕನ ಮೇಲೆ ಹಲ್ಲೆ
ಹೊಸನಗರ : ಮದ್ಯದ ವಿಚಾರವಾಗಿ ನಡು ರಸ್ತೆಯಲ್ಲೇ ಯುವಕನೊಬ್ಬನ ಮೇಲೆ ಹಲ್ಲೆ ನಡೆದ ಘಟನೆ ಸಂಪೆಕಟ್ಟೆ ಸರ್ಕಲ್‌ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೊಸನಗರ ತಾಲೂಕು ನಿಟ್ಟೂರು ಸಮೀಪದ ಸಂಪೆಕಟ್ಟೆ ಸರ್ಕಲ್‌ನಲ್ಲಿ ಲಕ್ಷ್ಮೀಶ ಎಂಬಾತ ಅಂಗಡಿಗೆ ತೆರಳಿದ್ದಾನೆ. ಈ ಸಂದರ್ಭ ಜೀಪಿನಲ್ಲಿ ಬಂದ ಸುಬ್ರಹ್ಮಣ್ಯ, ಅವಿನಾಶ, ರಾಘವೇಂದ್ರ ಎಂಬುವವರು ಮದ್ಯ ತೆಗೆದುಕೊಂಡು ಬಾ ಎಂದು ಲಕ್ಷ್ಮೀಶನಿಗೆ ಹೇಳಿದ್ದಾರೆ. ಲಕ್ಷ್ಮೀಶ ನಾನೇಕೆ ತೆಗೆದುಕೊಂಡು ಬರಬೇಕು ಎಂದು ಕೇಳಿದ್ದಾನೆ. ಮದ್ಯ ನಿರಾಕರಿಸಿದ ಕಾರಣ ಆತನ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ.
ಜೀಪ್‌ನ ಟಯರ್ ಬಿಚ್ಚುವ ರಾಡ್‌ನಿಂದ ಲಕ್ಷ್ಮೀಶನ ತಲೆಗೆ ಹೊಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಾಯಗೊಂಡಿದ್ದ ಲಕ್ಷ್ಮೀಶನನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Tags:
ಕ್ರೈಂ ಸುದ್ದಿ