ಶಿವಮೊಗ್ಗದಲ್ಲಿ ಯುವತಿಯ ಮೊಬೈಲ್ ಕದ್ದ ಮಂಗ, ಮೊಬೈಲ್ ನೋಡಿದ್ದೇ ನೋಡಿದ್ದು..!
ಶಿವಮೊಗ್ಗ: ನಂಜಪ್ಪ ಆಸ್ಪತ್ರೆ ಸಿಬ್ಬಂದಿಯೊಬ್ಬರ ಮೊಬೈಲ್ ಕಸಿದುಕೊಂಡ ಮಂಗವೊಂದು ಮರ ಹತ್ತಿ ಕುಳಿತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.
ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯ ಕಿಟಕಿಯೊಳಗೆ ಕೈ ಹಾಕಿದ ಮಂಗ, ಆಸ್ಪತ್ರೆ ಸಿಬ್ಬಂದಿಗೆ ಸೇರಿದ ಮೊಬೈಲ್ ಎತ್ತಿಕೊಂಡು ಪರಾರಿಯಾಗಿತ್ತು. ಮೊಬೈಲ್ ಕಸಿದುಕೊಂಡು ಆಸ್ಪತ್ರೆ ಪಕ್ಕದ ಮರವೇರಿ ಕುಳಿತಿದ್ದ ಮಂಗ ಜನರ ಕುತೂಹಲ ಮೂಡಿಸಿತ್ತು. ಮರದ ತುದಿಗೆ ಏರಿ ರೆಂಬೆಯೊಂದರ ಮೇಲೆ ಸುಮಾರು ಹೊತ್ತು ಕುಳಿತುಕೊಂಡು ಮೊಬೈಲನ್ನು ಹಿಡಿದು ಮೊಬೈಲ್ ಪರದೆ ಗಮನಿಸುತಿತ್ತು. ಇನ್ನು ಕೆಲವೊಮ್ಮೆ ಮೊಬೈಲ್ ಮೇಲೆ ಬೆರಳು ಆಡಿಸುತ್ತಾ, ಮೊಬೈಲ್ ಅನ್ನು ಕಿವಿಗೆ ಹಿಡಿದು ಆಟ ಆಡುತ್ತಿತ್ತು.
ಮೊಬೈಲ್ ಹಿಡಿದು ಮರವೇರಿದ್ದ ಮಂಗವನ್ನು ನೋಡಲು ದೊಡ್ಡ ಸಂಖ್ಯೆಯ ಜನರು ರಸ್ತೆ ಬದಿ ನಿಂತಿದ್ದರು. ಮಂಗದ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಏನೆಲ್ಲ ಮಾಡಬಹುದು ಎಂದು ತಲೆಕೆಡಿಸಿ ಕೊಂಡು ಯೋಚಿಸುತ್ತಿದ್ದರು. ನಂತರ ಮಂಗಕ್ಕೆ ಬಾಳೆ ಹಣ್ಣು ತೋರಿಸಿ ಬಾಳೆಹಣ್ಣಿನ ಆಸೆಗೆ ಕಟ್ಟಡದ ಮೇಲೆ ಬಂದ ಮಂಗ ಬಾಳೆ ಹಣ್ಣು ತೆಗೆದುಕೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿದ್ದಕ್ಕೆ ಬಾಳೆ ಹಣ್ಣು ಎತ್ತಿಕೊಂಡ ಮಂಗ ಮೊಬೈಲ್ ಬಿಟ್ಟು ಪರಾರಿಯಾಯಿತು.
Tags:
ಶಿವಮೊಗ್ಗ ಸುದ್ದಿ