ಪಾಕ್ ಮೇಲೆ ದಾಳಿ, ಪಹಲ್ಗಾಮ್‌ನಲ್ಲಿ ಮೃತರಾದ ಮಂಜುನಾಥ್ ತಾಯಿ ಹೇಳಿದ್ದೇನು?
ಶಿವಮೊಗ್ಗ: ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತ ತಡ ರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ನಡೆದ ದಾಳಿಗೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಶಿವಮೊಗ್ಗ ಜನತೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಅವರ ತಾಯಿ ಸುಮತಿ ಮಾಧ್ಯಮಗಳ ಜೊತೆಗೆ ಮಾತನಾಡಿ ಕುಟುಂಬದಲ್ಲಿ ಯಜಮಾನ ಯಾವುದೇ ತೀರ್ಮಾನ ಕೈಗೊಂಡರು ನಾವೆಲ್ಲ ಬದ್ಧರಾಗಿರುತ್ತೇವೆ. ಹಾಗೆಯೆ ನಮ್ಮ ದೇಶವನ್ನು ಕುಟುಂಬ ಎಂದು ಪರಿಗಣಿಸಿದರೆ ಮೋದಿ ಅವರು ಯಜಮಾನನ ಸ್ಥಾನದಲ್ಲಿದ್ದಾರೆ. ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹೊರ ದೇಶಕ್ಕೆಲ್ಲ ಆರಾಮವಾಗಿ ಹೋಗಿ ಬರುತ್ತಾರೆ. ಆದರೆ ನಮ್ಮದೇ ದೇಶದಲ್ಲಿ ನಾವು ಓಡಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಅನಿಸುತ್ತಿತ್ತು. ನನ್ನ ಮಗ ಪ್ರಕೃತಿ ಸೌಂದರ್ಯ ನೋಡಿ ಬರಲು ಹೋಗಿದ್ದವನು. ಮಲೆನಾಡಿನಲ್ಲಿ ಹುಟ್ಟಿದವನು ಅಲ್ಲಿ ಹೋಗಿ ಅನಾಥವಾಗಿ ಸಾವನ್ನಪ್ಪಿದ್ದ. ಇದು ನನಗೆ ಬಹಳ ನೋವಿದೆ. ಮೋದಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇನ್ನು ಮಂಗಳವಾರ ಸಂಜೆ ಎನ್‌ಐಎ ಅಧಿಕಾರಿಗಳು ಬಂದಿದ್ದರು. ಸರ್ಕಾರದ ಕಡೆಯಿಂದ ಎಂದು ತಿಳಿಸಿದ್ದರು. ಏನೆಲ್ಲಾ ಪ್ರಶ್ನೆಗಳನ್ನು ಕೇಳಿದರು ನಾವು ಉತ್ತರ ನೀಡಿದ್ದೇವೆ ಎಂದು ತಿಳಿಸಿದರು.
