ಮೋಟಾರ್ ಕೇಬಲ್ ವೈರ್ ಕಳ್ಳತನ ಪ್ರಕರಣ ಭೇದಿಸಿದ ಮಾಳೂರು ಪೊಲೀಸರು; ಆರೋಪಿ ಬಂಧನ
ತೀರ್ಥಹಳ್ಳಿ : ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರ ತೋಟಗಳಿಗೆ ನೀರು ಹಾಯಿಸಲು ತುಂಗಾ ನದಿಗೆ ಅಳವಡಿಸಿದ್ದ ಮೋಟಾರ್ ಕೇಬಲ್ ವೈರ್ ಕಳವು ಪ್ರಕರಣವನ್ನು ಮಾಳೂರು ಪೊಲೀಸ್ ಠಾಣೆ ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಡಗಳಲೆ ಗ್ರಾಮದ ಮುಡುಬಾಡು, ಮುಂಡುವಳ್ಳಿ, ಹೊಸಳ್ಳಿ ಹಾಗೂ ತೂದೂರು ಗ್ರಾಮದ ಸಮೀಪ ರೈತರು ಅಳವಡಿಸಿದ್ದ ಮೋಟಾರ್ ಕೇಬಲ್ ವೈರ್‌ಗಳು ಕಳುವಾಗಿದ್ದವು. ಈ ಸಂಬಂಧ ವೆಂಕಟೇಶ್, ರಾಜೇಂದ್ರ ಹೆಚ್.ಎಸ್. ಹಾಗೂ ಶಶಿಮೋಹನ ಅವರು ನೀಡಿದ ದೂರಿನ ಮೇರೆಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸ್ ತಂಡವು ಶಿವಮೊಗ್ಗ ನಗರದ ರಾಗಿಗುಡ್ಡ ನಿವಾಸಿ ಕುಮಾರ ಎಸ್.ಕೆ. (31) ಎಂಬಾತನನ್ನು ಬಂಧಿಸಿದೆ. ಆರೋಪಿಯಿಂದ ಅಂದಾಜು ₹93,000 ಮೌಲ್ಯದ 750 ಮೀಟರ್ ಉದ್ದದ ಮೋಟಾರ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ₹30,000 ಮೌಲ್ಯದ ಕೆಎ–31–ಆರ್–4944 ಸಂಖ್ಯೆಯ ಬಜಾಜ್ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ. ಕಾರಿಯಪ್ಪ, ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಅರವಿಂದ್ ಎನ್. ಕಲಗುಚ್ಚಿ ಹಾಗೂ ಮಾಳೂರು ವೃತ್ತ ನಿರೀಕ್ಷಕ ರಾಜಶೇಖರ್ ಎಲ್. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸುನೀಲ್ ಬಿ.ಸಿ., ಎಎಸ್‌ಐಗಳಾದ ನಾಗರಾಜ್ ಬಿ., ಸುರೇಶ್ ಎನ್. ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ