ತೀರ್ಥಹಳ್ಳಿಯಲ್ಲಿ ಅಕ್ರಮ ಬಂದೂಕು ತಯಾರಿಸುತ್ತಿದ್ದವನ ಬಂಧನ
ತೀರ್ಥಹಳ್ಳಿ : ತಾಲೂಕಿನ ಅಕ್ಲಾಪುರ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿದ್ದು ದಾಳಿಯಲ್ಲಿ ಸುಧಾಕರ್ ಆಚಾರಿ (56) ಎಂಬಾತನನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ ದೇಶಿ ನಿರ್ಮಿತ ಬಂದೂಕನ್ನು (ಕೋವಿ)ವಶಕ್ಕೆ ಪಡೆಯಲಾಗಿದೆ .
ಅಕ್ರಮ ನಾಡ ಬಂದೂಕು ತಯಾರಿಸುತ್ತಿದ್ದ ಆರೋಪದ ಮೇರೆಗೆ ಈ ದಾಳಿ ನಡೆದಿದೆ. ಜೂನ್ 20, 2026ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯಿಂದ ಒಂದು ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರವನ್ನು ಯಾವುದೇ ಪರವಾನಗಿ ಇಲ್ಲದೆ ಹೊಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಲೆನಾಡ ಭಾಗದಲ್ಲಿ ಬಂದೂಕು ರಿಪೇರಿ ಮಾಡಿಕೊಡುತ್ತಿದ್ದ ಸುಧಾಕರ್ ನಂತರ ಅಕ್ರಮ ಬಂದೂಕು ತಯಾರಿಕೆಯಲ್ಲಿ ತೊಡಗಿದ್ದ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಹೊಂದಿದ್ದ ವಿಚಾರ ಬೆಳಕಿಗೆ ಬಂದಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ. ಅಕ್ರಮವಾಗಿ ಬಂದೂಕು ಅಥವಾ ಇತರೆ ಶಸ್ತ್ರಾಸ್ತ್ರಗಳನ್ನು ಹೊಂದುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತೀರ್ಥಹಳ್ಳಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ತಮ್ಮ ಸುತ್ತಮುತ್ತ ಅಕ್ರಮ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.
Tags:
ಕ್ರೈಂ ಸುದ್ದಿ