ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ವಸೂಲಿ - ಶಿಕ್ಷಣಾಧಿಕಾರಿಗಳೇ ಗಮನವಹಿಸಿ..Government School Fees

ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ವಸೂಲಿ - ಶಿಕ್ಷಣಾಧಿಕಾರಿಗಳೇ ಗಮನವಹಿಸಿ..

ತೀರ್ಥಹಳ್ಳಿ : ಪಟ್ಟಣ ವ್ಯಾಪ್ತಿಯಲ್ಲಿರುವ ಅನೇಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ  ಪ್ರವೇಶ ಪಡೆಯಲು ಸರ್ಕಾರಿ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಪೋಷಕರು ತಮ್ಮ ಅಳಲನ್ನು ತೋರಿಕೊಂಡಿದ್ದಾರೆ...

ಸರ್ಕಾರಿ ಶುಲ್ಕ ಎಸ್ಸಿ, ಎಸ್ಟಿಗೆ ರೂ 110 ಇದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ರೂ 210 ಇದೆ.  ಹೆಣ್ಣುಮಕ್ಕಳಿಗೆ ರೂ 180 ಇದ್ದು ಈಗ ಶಾಲೆಗಳಲ್ಲಿ ಇನ್ನೊಂದು ಸೊನ್ನೆ ಸೇರಿಸಿ ರೂ 1800 ಹಣವನ್ನು  ಪಡೆದರೆ ಕೆಲವು ಸರ್ಕಾರಿ ಶಾಲೆಯಲ್ಲಿ 500 ಕ್ಕೂ ಹೆಚ್ಚುವರಿ ಹಣವನ್ನು  ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು  ವಸೂಲಿ ಮಾಡುತ್ತಿದ್ದಾರೆ. ಸೇವಾ ಶುಲ್ಕದ ರಶೀದಿಯಲ್ಲಿ ವಿದ್ಯಾರ್ಥಿನಿ ಸಂಘಕ್ಕೆ - ರೂ 150, ಪರೀಕ್ಷೆಗಳಿಗೆ ರೂ 260, ಬಾವುಟಗಳಿಗೆ ರೂ 40 ಗುರುತಿನಚೀಟಿ ರೂ 100, ಕ್ರಾಫ್ಟ್ -ರೂ 50, ಕಂಪ್ಯೂಟರ್ - ರೂ 600, ಶಾಲಾಭಿವೃದ್ಧಿ ಸಹಾಯಧನ - ರೂ 530 ಎಂದು ರಶೀದಿ ನೀಡಲಾಗಿದೆ. ಆದರೆ ಇದರ ಜೊತೆಗೆ ಸರ್ಕಾರಿ ರಶೀದಿಯಾಗಿ ವಿದ್ಯಾರ್ಥಿ ಸಂಘ SWF -ರೂ 15, ಶಿಕ್ಷಣ ಕ್ಷೇಮ ನಿಧಿ -ರೂ 15, 
ವಿದ್ಯಾರ್ಥಿ ಕ್ಷೇಮ ನಿಧಿ ರೂ 20, ಸ್ವಚ್ಛತಾ ಶುಲ್ಕ -ರೂ 15, ಭಾರತ ಸೇವಾ ದಳ - ರೂ 5 ರಂತೆ ಒಟ್ಟು 70 ರೂ ರಶೀದಿ ಬೇರೆ ನೀಡಲಾಗಿದೆ.. ಹಾಗಾದರೆ 1800 ರೂಗಳಲ್ಲಿ 70 ರೂ ಸರ್ಕಾರಿ ಶುಲ್ಕ ಆದರೆ ಉಳಿದ ಹಣ ಯಾರ ಪಾಲಾಗುತ್ತದೆ ಎಂಬುದು ಈಗ ಯಕ್ಷ ಪ್ರೆಶ್ನೆಯಾಗಿದೆ..


ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಶುಲ್ಕ ಹೊರತುಪಡಿಸಿ ಇತರೆ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ. ಆದರೆ, ಇವರು ಖಾಸಗಿ ಶಾಲೆಗಳಂತೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ್ದಾರೆ.  ಈ ಬಗ್ಗೆ ಪ್ರಶ್ನೆ ಮಾಡಿದ ಪೋಷಕರಿಗೆ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಬುಸುಗುಟ್ಟಿದ್ದು ತನ್ನದು ತಪ್ಪಿಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ..

ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್ ಅವರು ಸರ್ಕಾರಿ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಸರ್ಕಾರಿ ಶಾಲೆಗಳಿಗೆ ಭೇಟಿಕೊಟ್ಟು ಇಲ್ಲಿ ಈ ಹಿಂದೆ ಆಗಿರುವ ಮತ್ತು ಈಗ ಆಗುತ್ತಿರುವ ಅವ್ಯವಹಾರಗಳನ್ನು ತನಿಖೆ ಮಾಡಬೇಕು. ಈಗಾಗಲೇ ಹೆಚ್ಚುವರಿ ಹಣವನ್ನು ವಸೂಲಿ ಮಾಡಿರುವುದನ್ನು ವಾಪಾಸ್ ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಲ್ಲದೆ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ..




Previous Post Next Post