ವಿಬಿಜಿ ರಾಮ್‌ಜಿ ಯೋಜನೆಯನ್ನು ಯಾವ ರಾಜ್ಯವೂ ಜಾರಿ ಮಾಡಲು ಆಗಲ್ಲ: ಡಿ.ಕೆ.ಶಿವಕುಮಾರ್
ಶಿವಮೊಗ್ಗ: ಕೇಂದ್ರದ ನೀತಿಯಂತೆ ವಿಬಿಜಿ ರಾಮ್ ಜಿ ಯೋಜನೆಯನ್ನು ಯಾವ ರಾಜ್ಯವೂ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ವಿಬಿಜಿ ರಾಮ್ ಜಿ ಯೋಜನೆಗೆ ವಿರೋಧ ಮಾಡುವ ಕುರಿತು ಮೊನ್ನೆಯೇ ನಮ್ಮ ಸಿಎಲ್ಪಿ ನಾಯಕರಾದ ಸಿಎಂ ಪ್ರಸ್ತಾಪನೆ ಮಾಡಿದ್ದರು. ಅದನ್ನು ಬಿಸಿನೆಸ್ ಅಡ್ವೈಸರಿ ಕಮಿಟಿಯಲ್ಲಿಟ್ಟು ತೀರ್ಮಾನ ಮಾಡಬೇಕು ಎಂದು ಸ್ಪೀಕರ್ ಹೇಳಿದ್ದರು. ನಿನ್ನೆ ಈ ಕುರಿತು ಚರ್ಚೆ ಆಗಿದೆ. ಯಾಕೆ ಅದನ್ನು ರದ್ದು ಮಾಡಬೇಕು ಎಂದು ನಾವು ತಿಳಿಸುತ್ತೇವೆ. ಈಗಿನ ನಿಯಮಾವಳಿ ಪ್ರಕಾರ ಅದನ್ನು ಜಾರಿ ಮಾಡಲು ಯಾವ ರಾಜ್ಯದವರಿಂದಲೂ ಸಾಧ್ಯವಿಲ್ಲ ಎಂದರು.
ಈಗ ನೋಡಿ ನಾಲ್ಕೈದು ತಿಂಗಳು ವ್ಯವಸಾಯದ ಕಾಲ. ಅವರ ಕೂಲಿಯನ್ನು ಅವರು ಪಡೆದುಕೊಳ್ಳುತ್ತಿದ್ದರು. ಇದರಿಂದ ಅನುಕೂಲ ಏನೂ ಆಗಲ್ಲ. 125 ದಿನ ಮಾಡುತ್ತೇವೆ ಅಂತ ಹೇಳಬಹುದು ಅಷ್ಟೇ. ಬೇರೆ ದಿನದಲ್ಲಿ ಕೊಡಲು ಆಗುವುದಿಲ್ಲ. ರಾಜ್ಯಗಳು ಸಹ ಕೊಡಲಿಕ್ಕೆ ಆಗುವುದಿಲ್ಲ. ಒಂದೊಂದು ಪಂಚಾಯಿತಿಗೆ ಒಂದೂವರೆ ಕೋಟಿ ರೂ. ತನಕ ಕಾಮಗಾರಿ ನಷ್ಟವಾಗುತ್ತಿದೆ. ಉದ್ಯೋಗ ಕಾರ್ಡ್ ಇಟ್ಟುಕೊಂಡವರಿಗೂ ಸಹ ನಷ್ಟ ಉಂಟಾಗುತ್ತದೆ ಎಂದು ಹೇಳಿದರು.
ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಭ್ರಷ್ಟಚಾರದ ಕ್ಯಾಂಪೇನ್ ಕುರಿತು ಮಾತನಾಡಿದ ಅವರು, ನಾವು ಅವರ ಬಗ್ಗೆ ಸಾಕಷ್ಟು ಬಿಚ್ಚಿದ್ದೇವೆ. ಕೋವಿಡ್ ಸೇರಿದಂತೆ ಇನ್ನೂ ಇದೆ ಎಂದರು.
ಅಬಕಾರಿ ಸಚಿವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ಕುರಿತು ಮಾತನಾಡಿ, ಬಿಜೆಪಿಗೆ ಯಾವುದಾದರೂ ಒಂದು ವಿಷಯ ಬೇಕಲ್ಲ. ಅದೆಲ್ಲಾ ತನಿಖೆ ಆಗಬೇಕು. ಆ ಮೇಲೆ ನೋಡೋಣ ಎಂದರು.
ಕೇಂದ್ರ ಸರ್ಕಾರ ಯಾವಾಗಲೂ ನಮ್ಮ ಮೇಲೆ ಮಲತಾಯಿ ಧೋರಣೆ ತೋರುತ್ತಿದೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಕುರಿತು 5 ಸಾವಿರ ಕೋಟಿ ರೂ ನೀಡುತ್ತೇನೆ ಇನ್ನೂ ಕೊಟ್ಟಿಲ್ಲ. ಈ ಬಗ್ಗೆ ಸಂಸದರು ಹಾಗೂ ಕೇಂದ್ರ ಸಚಿವರು ಧ್ವನಿ ಎತ್ತಿಲ್ಲ. ಇದರಿಂದ ಕೇಂದ್ರದ ಬಜೆಟ್ ಮೇಲೆ ನಮಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ತಿಳಿಸಿದರು.
ಇಂಧನ ಸಚಿವ ಕೆ. ಜೆ.ಜಾರ್ಜ್ ರಾಜೀನಾಮೆ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಜಾರ್ಜ್ ಬಹಳ ಹಿರಿಯ ರಾಜಕಾರಣಿಗಳಾಗಿದ್ದಾರೆ. ಅವರು ಯಾಕೆ ರಾಜೀನಾಮೆ ನೀಡುತ್ತಾರೆ. ಅದೆಲ್ಲಾ ಸುಳ್ಳು. ಅದೆಲ್ಲಾ ಊಹಾಪೋಹಾ ಅಷ್ಟೇ ಎಂದರು.
Tags:
ಶಿವಮೊಗ್ಗ ಸುದ್ದಿ