ತೀರ್ಥಹಳ್ಳಿ ಶಾಸಕರನ್ನು ನೋಡಲು ಬಂತಾ ಕಾಡಾನೆ?- ಗುಡ್ಡೆಕೊಪ್ಪ ಬಳಿ ಕಾಣಿಸಿಕೊಂಡ ಒಂಟಿ ಸಲಗ..!
ತೀರ್ಥಹಳ್ಳಿ : ತೀರ್ಥಹಳ್ಳಿಯ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಸಂಚಾರ ಮಾಡುತ್ತಿದ್ದು ಅತ್ಯಂತ ವೇಗವಾಗಿ ಒಂದೆಡಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡುತ್ತಿದೆ. ಶನಿವಾರ ಕುಚ್ಚಲು ಸಮೀಪ ಕಾಣಿಸಿಕೊಂಡಿದ್ದ
ಕಾಡಾನೆ ಇದೀಗ ಆರಗದ ಕಲ್ಗುಂಡಿ ಸಮೀಪ ಕಾಣಿಸಿಕೊಂಡಿದೆ. ಬೆಳಗಿನ ಜಾವವೇ ಓಡಾಟ ಆರಂಭಿಸಿರುವ ಆನೆ ಸರಿ ಸುಮಾರು 50 ಕಿ.ಮೀ. ಕ್ರಮಿಸಿದೆ.
ಶುಕ್ರವಾರದಿಂದ ಶುರುವಾದ ಕಾಡಾನೆ ಸಂಚಾರ ಮುತ್ತಿನಕೊಪ್ಪದ ಮೂಲಕ ತುಂಗಾ ನದಿ ದಾಟಿ ಮುಡುಬ, ಉಳ್ಳೂರು ಘಟ್ಟ, ಮಣಿವೆ, ಉಟ್ಟೂರು, ಕುಚ್ಚಲು, ನಿನ್ನೆ ರಾತ್ರಿ ಬಾಳೇಗುಡ್ಡ ಕಾಡಿನಲ್ಲಿ ನಿದ್ರೆ, ಹಿರೇಬೈಲು, ಸೀಕೆ,
ಕಾನಳ್ಳಿ, ದಾನಸಾಲೆ, ಹೊಸಬೀಡು, ಏಳುಮನೆ ಮಾರ್ಗ,
ಕೋಣಂದೂರು, ಅರಳಸುರಳಿ, ನೊಣಬೂರು, ಗುಡೇಕೊಪ್ಪ, ಕಲ್ಲುಂಡಿ, ಪಟಮಕ್ಕಿ ಈಗ ಆರಗಕ್ಕೆ ಬಂದಿದೆ.
ಒಂಟಿ ಸಲಗ ದಾರಿ ತಪ್ಪಿದ್ದು ಹೇಗೆ??
ಭದ್ರ ಅಭಯಾರಣ್ಯ ವ್ಯಾಪ್ತಿಯಿಂದ ತಪ್ಪಿಸಿಕೊಂಡ
ಸುಮಾರು 15 ವರ್ಷದ ಈ ಒಂಟಿ ಸಲಗ ಸಕಲೇಶಪುರದಲ್ಲಿ
ಇತ್ತೀಚಿಗೆ ಕಂಡುಬಂದಿತ್ತು. ಅಲ್ಲದೇ ಆನೆಯ ಕಾಲ್ತುಳಿತಕ್ಕೂ ಜನ ಸತ್ತಿದ್ದಾರೆಂಬ ಭಯದ ವಾತಾವರಣ ಈಗ ಇಲ್ಲೂ ನಿರ್ಮಾಣವಾಗುತ್ತಿದೆ. ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಹಿಡಿದ ಪುಂಡಾನೆಗಳನ್ನು ಭದ್ರಾ ಆಭಯಾರಣ್ಯಕ್ಕೆ ತಂದು ಬಿಡಲಾಗುತ್ತಿದ್ದು ಅದನ್ನು ಸರಿಯಾಗಿ ವನ್ಯಜೀವಿ ವಿಭಾಗದ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈಗ ಯಾವ ಮಾರ್ಗ ದಲ್ಲಿ ವಾಪಾಸ್ ಆಗಬೇಕು?
ಈಗಾಗಲೇ ಆರಗ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಈ ಗಂಡಾನೆ ಕೊಂಡ್ಲೂರು, ಸಾಲೂರು, ಕವಲೇದುರ್ಗ,
ಯಡೂರು, ಮಾಸ್ತಿಕಟ್ಟೆ ಮೂಲಕ ವರಾಹಿ ಹಿನ್ನೀರು ಭಾಗಕ್ಕೆ ತಲುಪಿಸುವ ಪ್ರಯತ್ನ ನಡೆಸಬೇಕು. ಹೀಗೆ ಹೋದ ಆನೆ ತೀರ್ಥಹಳ್ಳಿಯ ಹುರುಳಿ, ಗಾರ್ಡರಗದ್ದೆ, ಕೊರನಕೋಟೆ, ನಾಲೂರು, ಇಳಿಮನೆ, ಬೋಳುಗುಡ್ಡ ಮಾರ್ಗವಾಗಿ ಆಗುಂಬೆ ಪ್ರವೇಶಿಸಬೇಕು. ನಂತರ ಸಕಲೇಶಪುರದಿಂದ ವರ್ಷ ಬರುವ ಒಂಟಿ ಕಾಡಾನೆಯ ಹಾದಿ ಹಿಡಿದು ಪುನಃ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ಸಕಲೇಶಪುರ ಪ್ರವೇಶಿಸಬೇಕಿದೆ.
ಮದ್ದು ಹೊಡೆಯುವುದು ಆನೆ ಜೀವಕ್ಕೆ ಅಪಾಯ..!
ದೇವಂಗಿ ಕಾಡಿನಲ್ಲಿ ಕಳೆದ ವರ್ಷ ಮರಿಯಾನೆ ಹಿಡಿದು
ನಾಗರಹೊಳೆ ವನ್ಯಜೀವಿ ವಿಭಾಗಕ್ಕೆ ಬಿಡಲಾಗಿತ್ತು. ಅದೇ
ರೀತಿಯಲ್ಲಿಯೇ ಈ ಆನೆಯನ್ನು ಸಕಲೇಶಪುರದಿಂದ ಭದ್ರಾ ಅಭಯಾರಣ್ಯಕ್ಕೆ ತರಲಾಗಿತ್ತು. ಆದರೆ ಇಲಾಖೆ ಅಧಿಕಾರಿಗಳು ತೆಗೆದುಕೊಂಡ ನಿರ್ಲಕ್ಷ ಧೋರಣೆಯಿಂದಾಗಿ ಆನೆ ಪುನಃ ನಗರ ಪ್ರದೇಶಕ್ಕೆ ನುಗ್ಗುತ್ತಿದೆ. ಅಲ್ಲದೇ ಈಗಾಗಲೇ ಡಾಟ್ ಆಗಿರುವ ಆನೆಗೆ ಪದೇ ಪದೇ ಮದ್ದು ಹೊಡೆಯುವುದು ಕೂಡ ಆನೆಯ ಜೀವಕ್ಕೆ ಅಪಾಯವಾಗಿದೆ. ಇವೆಲ್ಲವನ್ನು ಮುಂದಿಟ್ಟುಕೊಂಡು ಆನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಯುತ್ತಿದೆ.
ಒಟ್ಟಿನಲ್ಲಿ ಈ ಎಲ್ಲಾ ಘಟನೆ ನಡೆಯಬೇಕಾದರೆ ಕನಿಷ್ಟ ಆನೆಗೆ 15 ದಿನಗಳು ಅವಶ್ಯಕವಾಗಿದೆ. ಅಲ್ಲಿಯವರೆಗೆ ಸಾರ್ವಜನಿರಿಗೆ ಯಾವುದೇ ತೊಂದರೆ ಆಗದಿರಲಿ ಎಂಬ ಮಾತು ಗಳು ಕೇಳಿ ಬಂದಿದೆ.
Tags:
ತೀರ್ಥಹಳ್ಳಿ ಸುದ್ದಿ